ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೋಶಿ ಬದಲಿಸಲೇಬೇಕು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಟ್ಟು

IMG_20240331_110910_525-1.jpg
Published on

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ಬದಲಾವಣೆಗೆ ತಾವು ಕೊಟ್ಟ ಗಡವು ಮುಗಿದಿದೆ. ಅವರ ಪಕ್ಷದ ಅನೇಕ ನಾಯಕರು ನಮ್ಮ ಮನವೊಲಿಕೆಗೆ ಪ್ರಯತ್ನ ನಡೆಸಿದರು. ಆದರೆ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಈಗಾಗಲೇ ಮಠಾಧೀಶರ ನಿಲುವು ತಿಳಿದುಕೊಂಡಿದ್ದೇನೆ. ಏ. ೨ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದು ಅವರ ನಿಲುವು ತಿಳಿದುಕೊಂಡ ನಂತರ ಮತ್ತೆ ನನ್ನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಮಠಾಧೀಶರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರಲ್ಲ. ಭಕ್ತರ ಅಭಿಪ್ರಾಯ ಪಡೆದ ನಂತರ ಮುಂದಿನ ನಡೆಯನ್ನು ತಿಳಿಸಲಾಗುವುದು ಎಂದರು.

ಜೋಶಿ ಅವರ ಬದಲಾವಣೆಗೆ ಪಟ್ಟು ಹಿಡಿದ ಬಳಿಕ ಬಹುಸಂಖ್ಯಾತ ಸಮಾಜದ ನಾಯಕರು ದೂರವಾಣಿ ಮೂಲಕ ಮತ್ತು ಮುಖತಃ ಭೇಟಿಯಾಗಿ ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಜಗ್ಗದಿದ್ದಾಗ ಮಾನ, ಪ್ರಾಣ ಹಾನಿ ಮಾಡುವ ಹಾಗೂ ಜೈಲಿಗೆ ಕಳಿಸುವ ಬಗ್ಗೆ ಬೆದರಿಕೆಯ ಕರೆಗಳು ಬಂದಿವೆ. ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಮ್ಮ ಪ್ರಾಣ, ಮಾನ ಹೋದರೂ ಸರಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಖಡಕ್ ಆಗಿ ಹೇಳಿದರು.

ಧಾರವಾಡದ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಎರಡು ವಿಡಿಯೋ ಬಿಡುಗಡೆ ಮಾಡಿದಾರೆ. ಕೆಲವರು ಸ್ವಾಮೀಜಿಗಳ ಮೇಲೆ ಒತ್ತಡ ಹಾಕಿ ಈ ರೀತಿ ವೀಡಿಯೋ ಮಾಡಿಸುತ್ತಿದ್ದಾರೆ. ನಾಡಿನ ಅನೇಕ ಮಠಾಧೀಶರ ಹೇಳಿಕೆಗಳನ್ನು ಬದಲಾವಣೆ ಮಾಡಬಹುದು. ಆದರೆ, ದಿಂಗಾಲೇಶ್ವರ ಸ್ವಾಮೀಜಿಯ ನಿರ್ಧಾರ ಬದಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಕೆಲ ಸ್ವಾಮೀಜಿಗಳಿಂದ ಬಲವಂತವಾಗಿ ಪತ್ರ ಓದಿಸಲಾಗುತ್ತಿದೆ. ಇದನ್ನು ಸ್ವತಃ ಹಿರಿಯ ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಮೂರು ಸಾವಿರ ಮಠಕ್ಕೂ ಇದೇ ಪತ್ರ ತಲುಪಿದೆ. ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಮೇಲೆ ಒತ್ತಡ ಹೇರುವ ತಂತ್ರ ನಡೆದಿದೆ. ಕೆಲವರು ಮುಜುಗರಕ್ಕೀಡಾಗುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಮುಂದೆ ನಡೆಯುವ ಸಭೆಗಳಲ್ಲಿ ಮಠಾಧೀಶರನ್ನು ಕರೆಯುವುದಿಲ್ಲ. ಮತದಾರರೇ ನಮ್ಮ ಹೈಕಮಾಂಡ್ ಅವರ ಮಧ್ಯದಲ್ಲೇ ನಿರ್ಣಯವನ್ನು ಇತ್ಯರ್ಥ ಮಾಡಲಾಗುವುದು ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net