

ಮಡಿಕೇರಿ: ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ದಿನೇಶ್ ಕಾರ್ಯಪ್ಪ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ನಾಸೀರ್ ಅಹಮ್ಮದ್ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಫೋರ್ಟ್ ಮರ್ಕೇರಾ ಹೊಟೇಲ್‌ನಲ್ಲಿ ಇತ್ತೀಚೆಗೆ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಅಧಿಕಾರವನ್ನು ದಿನೇಶ್ ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ನಾಸೀರ್ ಅಹ್ಮದ್, ಮಡಿಕೇರಿ ವಿಭಾಗದ ಉಪ ಅಧ್ಯಕ್ಷರಾಗಿ ಎಂ.ಬಿ.ಝಹೀರ್ ಅಹ್ಮದ್, ವಿರಾಜಪೇಟೆ ವಿಭಾಗದ ಉಪ ಅಧ್ಯಕ್ಷರಾಗಿ ಬಿ.ಸಿ.ಮಂಜುನಾಥ್, ಸೋಮವಾರಪೇಟೆ ವಿಭಾಗದ ಉಪ ಅಧ್ಯಕ್ಷರಾಗಿ ಸುಂದರ್ ಹಾಗೂ ಕುಶಾಲನಗರ ವಿಭಾಗದ ಉಪಾಧ್ಯಕ್ಷರಾಗಿ ರಥೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಾಸೀರ್ ಅಹಮ್ಮದ್ ವರದಿ ಮಂಡಿಸಿದರೆ, ಖಜಾಂಚಿ ಭಾಸ್ಕರ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಥಾಹೀರ್ ಸಂಘದ ಕಾರ್ಯಚಟುವಟಿಕೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್‌ನ ಹಿರಿಯ ಸದಸ್ಯ ಮಡಿಕೇರಿಯ ಹೋಟೆಲ್ ಚಿತ್ರಾದ ಮಾಲೀಕ ಗಣೇಶ್ ಮತ್ತು ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಮಂಜುನಾಥ್ ವಂದಿಸಿದರು.