

ಮಡಿಕೇರಿ: ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಪಂದಿಕಂಡ ದಿನೇಶ್(ಕುಶ) ಹಾಗೂ ಆಮೀನಾ ಅವಿರೋಧ ಆಯ್ಕೆಯಾದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಬೆಂಬಲಿತ ಅಭ್ಯರ್ಥಿಯಾಗಿ ದಿನೇಶ್(ಕುಶ) ಹಾಗೂ ಆಮೀನಾ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ.ಬಿ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಹತ್ತು ಸದಸ್ಯರ ಬಲವಿರುವ ಹಾಲುಗುಂದ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬಹುಮತವಿದ್ದ ಕಾರಣ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಪ್ರಕಾಶ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಪಂದಿಕಂಡ ದಿನೇಶ್(ಕುಶ), ಕಳೆದ ಮೂರು ಅವದಿಯಿಂದ ಹಾಲುಗುಂದ ಗ್ರಾಮ ಪಂಚಾಯಿತಿ ಸದಸ್ಯನಾಗಿ ಗ್ರಾಮಸ್ಥರ ಸೇವೆ ಮಾಡುತ್ತಾ ಬಂದಿದ್ದೇನೆ. ಕಳೆದ ಎರಡುವರೆ ವರ್ಷಗಳ ಅವದಿಯಲ್ಲಿ ಎಲ್ಲಾ ಸಹಕಾರದಿಂದ ಉಪಾಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಇದೀಗ ಮೀಸಲಾತಿ ಪರಿಣಾಮ ಕಾಂಗ್ರೆಸ್ ಪಕ್ಷ ಹಾಗೂ ಹಾಲುಗುಂದ ಗ್ರಾಮ ಪಂಚಾಯತಿ ಸದಸ್ಯರು ಎಲ್ಲರೂ ನನ್ನೊಂದಿಗೆ ಕೈ ಜೋಡಿಸಿ ಅವಿರೋಧ ಆಯ್ಕೆಯಾಗಲು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಕೊಡಗು ಜಿಲ್ಲೆಯಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯಾಗಿ, ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಕಳೆದ ಎರಡು ದಶಕಗಳಿಂದ ಹಾಲುಗುಂದ ಗ್ರಾಮ ಪಂಚಾಯತಿ ಸದಸ್ಯರಾಗಿ ದಿನೇಶ್(ಕುಶ)ರವರು ಜನಸೇವೆಯಲ್ಲಿದ್ದಾರೆ. ಇವರ ನೂತನ ಆಡಳಿತ ಮಂಡಳಿಯು ಉತ್ತಮ ಆಡಳಿತ ನೀಡಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಬಾನಂಡ ಪೃಥ್ಯು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೀತೆಬೊಳ್ಳಿ, ಗ್ರಾ.ಪಂ ಸದಸ್ಯರಾದ ಅಬ್ದುರಹಮಾನ್(ಅಂದಾಯಿ), ಲೋಕೇಶ್, ಪೂವಯ್ಯ, ಬೇಬಿ, ನಾಗೇಶ್(ಈಶ್ವರ್) ದೀಪು ಮಾಚಯ್ಯ, ಪಂದಿಕಂಡ ಕುಟುಂಬಸ್ಥರು ಹಾಗೂ ಹಾಲುಗುಂದ, ಕೊಂಡಂಗೇರಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.