

ಮೈಸೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ನಗರದ ಮಾತಾ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ನನಗೆ ಸತ್ಯ ಹೇಳಿ. ಈಗ ಏಕೆ ಈ ಆಸ್ಪತ್ರೆಗೆ ನೋಟಿಸ್ ಅಂಟಿಸಿದ್ದೀರಾ? ನಿಮಗೆ ಇಲ್ಲಿ ಆಸ್ಪತ್ರೆ ಇತ್ತು ಎಂಬುದು ಗೊತ್ತಿರಲಿಲ್ವೆ? ಇದು ಗಂಭೀರವಾದ ಪ್ರಕರಣ. ಇಲ್ಲಿ ಸುಳ್ಳು ಹೇಳಬೇಡಿ’ ಎಂದು ತರಾಟೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ, ಸರ್ ನಾನು ಎರಡು ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿದ್ದೇನೆ. ನಾನು ಬಂದಾಗಿನಿಂದ ಇಲ್ಲಿ ಅಸ್ಪತ್ರೆಯೇ ಇರಲಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ತಕ್ಷಣ ಅಕ್ಕಪಕ್ಕದವರ ಕರೆದು ಮಾಹಿತಿ ಪಡೆದ ಸಚಿವ ಗುಂಡೂರಾವ್ ಅವರು ‘ಇಲ್ಲಿ ಆಸ್ಪತ್ರೆ ನಡೆಯುತ್ತಿದೆ. ಆದರೆ, ಮೂರು ತಿಂಗಳ ಹಿಂದೆ ಬಂದ್ ಆಗಿದೆ’ ಎಂದು ಸ್ಥಳೀಯರು ತಿಳಿಸಿದರು.
ಈ ವೇಳೆ ಆರೋಗ್ಯಾಧಿಕಾರಿ ಮೇಲೆ ಮತ್ತೆ ಸಚಿವ ದಿನೇಶ್ ಗುಂಡೂರಾವ್ ಸಿಟ್ಟಾದರು. ಆಗ ಗಾಬರಿಗೊಂಡ ಆರೋಗ್ಯಾಧಿಕಾರಿ ಅವರು ‘ಇಲ್ಲ. ಸರ್ ನಿಜವಾಗಿಯೂ ಆಸ್ಪತ್ರೆ ಇರಲಿಲ್ಲ. ಲೆಟರ್ ಟೈಪ್ ಮಾಡುವ ವೇಳೆ ದಿನಾಂಕ ತಪ್ಪಾಗಿದೆ. ಅದರಿಂದ ನೋಟಿಸ್‌ನಲ್ಲಿ ದಿನಾಂಕದಲ್ಲಿ ವ್ಯತ್ಯಾಸವಾಗಿದೆ’ ಎಂದು ಸಮಜಾಯಿಷಿ ನೀಡಿದಾಗಲೂ ಸಚಿವರು ಗರಂ ಆಗಿ ಅಲ್ಲಿಯಿಂದ ನಿರ್ಗಮಿಸಿದರು.