ಖಾಸಗಿ ಆಂಬುಲೆನ್ಸ್‌ ನಿಯಂತ್ರಣಕ್ಕೆ ಕ್ರಮ ದಿನೇಶ ಗುಂಡುರಾವ್‌

Health miniser 2
Published on

ಕಾರವಾರ: ರಾಜ್ಯದಲ್ಲಿನ ವೈದ್ಯಕೀಯ ಆಂಬುಲೆನ್ಸ್ಗಳ ಸೇವೆಯನ್ನು ಇನ್ನು ಮುಂದೆ ಕೆಪಿಎಂಇ ಕಾನೂನಿನ ಅಡಿಯಲ್ಲಿ ತರಲು ನಿರ್ಧರಿಸಿದ್ದು, ಈ ಕುರಿತಂತೆ ಬರುವ ವಿಧಾನಸಭೆಯ ಅಧಿವೇಶನದಲ್ಲಿ ಕಾಯಿದೆ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅವರು ಬುಧವಾರ ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪ್ರಸ್ತುತ ಇರುವ ಅಂಬುಲೆನ್ಸ್ ಒದಗಿಸುತ್ತಿರುವ ಸೇವೆಗಳು ಮತ್ತು ಗುಣಮಟ್ಟದ ಬಗ್ಗೆ ಹಲವು ದೂರುಗಳು ಬರುತ್ತಿದ್ದು, ಈ ಕುರಿತಂತೆ ಆಂಬುಲೆನ್ಸ್ಗಳು ಯಾವ ರೀತಿ ಇರಬೇಕು, ಅದರಲ್ಲಿ ಯಾವ ಅಗತ್ಯ ವ್ಯವಸ್ಥೆಗಳು ಇರಬೇಕು ಎಂಬ ಬಗ್ಗೆ ಹಾಗೂ ಅವುಗಳಿಗೆ ನಿಗಧಿತ ದರ ನಿಗಧಿಪಡಿಸುವ ಬಗ್ಗೆ ಕಾನೂನು ರಚಿಸಲಾಗುತ್ತಿದ್ದು, ಇನ್ನು ಮುಂದೆ ಆಂಬುಲೆನ್ಸ್ ಸೇವೆ ಒದಗಿಸುವವರು

ಮತ್ತು ಮೊಬೈಲ್ ಹೆಲ್ತ್ ಯೂನಿಟ್ ಗಳು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು

ಎಂದರು.

ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗುವ ಆಂಬುಲೆನ್ಸ್ ಗಳಿಗೆ ಅವುಗಳ ಒದಗಿಸುವ ಸೇವೆಯ ಆಧಾರದಲ್ಲಿ ದರ ನಿಗಧಿಪಡಿಸಲಾಗುವುದು, ಆಂಬುಲೆನ್ಸ್ ಸೇವೆಯ ಅಗತ್ಯವಿರುವವರು ಆಪ್ ಮೂಲಕ ಬುಕ್ಕಿಂಗ್ ಮಾಡುವ ಸೌಲಭ್ಯ ಒದಗಿಸಲಾಗುವುದು, ಈ ಮೂಲಕ ಆಂಬುಲೆನ್ಸ್ ಸೇವೆಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆಯಲ್ಲಿ 5500 ಮಂದಿಯನ್ನು ಯಾವುದೇ ಶಿಫಾರಸ್ಸು ಹಸ್ತಕ್ಷೇಪವಿಲ್ಲದೇ ಪಾರದರ್ಶಕವಾಗಿ ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ತಜ್ಞ ವೈದ್ಯರ ವೇತನ ಹೆಚ್ಚಳ ಮಾಡುವುದು ಮಾತ್ರವಲ್ಲದೆ ನೇಮಕಾತಿ ಕೂಡಾ ಮಾಡಲಾಗುತ್ತಿದೆ ಎಂದರು.

108 ಸೇವೆಯನ್ನು ಸಂಪೂರ್ಣ ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಿದ್ದು, ಈಗಾಗಲೇ ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಲಿದ್ದು, ಇದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದ್ದು, ಮುಂದಿನ ತಿಂಗಳು ಎಲ್ಲಾ ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂ ತೆರೆದು, ನಮ್ಮ ಅಧಿಕಾರಿಗಳೇ 108 ನ್ನು ನಿರ್ವಹಣೆ ಮಾಡಲಿದ್ದು, ಇದಕ್ಕಾಗಿ ಪ್ರತ್ಯೇಕ ಕಂಟ್ರೋಲ್ ರೂಂ ನ್ನು ತೆರೆಯಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಪೀಡಿತರಿಗೆ ಹೊನ್ನಾವರದಲ್ಲಿ ಚಿಕಿತ್ಸೆ, ಆರೈಕೆ ನೀಡಲು 100 ಬೆಡ್ ನ ಪ್ರತ್ಯೇಕ ಕೇಂದ್ರ ತೆರೆಯುವ ಬಗ್ಗೆ ಮುಖ್ಯಮಂತ್ರಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು , 3 ನೇ ತೆಲೆಮಾರಿಗೆ ಹರಡುತ್ತಿರುವ ಕುರಿತ ಅಧ್ಯಯನ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು, ಮಂಗನ ಖಾಯಿಲೆಗೆ ಲಸಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಒಂದು ವರ್ಷದಲ್ಲಿ

ಹೊಸ ಲಸಿಕೆ ಬರುವ ಸಾಧ್ಯತೆಯಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಹಾಗೂ ಜಿಲ್ಲೆಯ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net