ಮಳೆಗೆ ಸರ್ವ ಸನ್ನದ್ಧರಾಗಿರಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

gundurao_vb_40
Published on



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿರಲು ದ.ಕ. ಜಿಲ್ಲಾ
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸೂಚಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ ಅವರು ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯ ಮಾಹಿತಿ ಪಡೆದರು.
ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ತುರ್ತು ಸ್ಪಂದನಾ ಪಡೆ ಸದಾ ಸನ್ನದ್ಧವಾಗಿರಬೇಕು. ಮುಳುಗಡೆ ಪ್ರದೇಶದ ನಿವಾಸಿಗಳನ್ನು ಆದ್ಯತೆಯಲ್ಲಿ ಸ್ಥಳಾಂತರಿಸಬೇಕು. ನದಿ ಪಾತ್ರ ಹಾಗೂ ಕಡಲ ಕೊರೆತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗೆ ಸುಸಜ್ಜಿತ ತಂಡ ನಿಯೋಜಿಸಬೇಕು. ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದರೆ, ಶೀಘ್ರ ತೆರವುಗೊಳಿಸಬೇಕು. ವಿದ್ಯುತ್ ಕಂಬಗಳು ಬಿದ್ದ ಪ್ರಕರಣಗಳಲ್ಲಿ ಕೂಡಲೇ ಕ್ರಮ ಕೈಗೊಂಡು ವಿದ್ಯುತ್ ಸಪರ್ಕ ಪುನರ್ ಸ್ಥಾಪಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸಾರ್ವಜನಿಕರ ಹಾಗೂ ಜಾನುವಾರುಗಳ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮಳೆ ಪರಿಸ್ಥಿತಿ ಮೇಲೆ ನಿಗಾ ಇಡಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪರಿಸ್ಥಿತಿ ಬಗ್ಗೆ ನೆರೆಯ ಜಿಲ್ಲೆಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕಾರ್ಯಾಚರಿಸುವಂತೆ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿ ಬಗ್ಗೆ ಸಚಿವರಿಗೆ ವಿವರ ನೀಡಿದರು. ಪುತ್ತೂರಿನಲ್ಲಿ ಒಂದು ಎನ್‌ಡಿಆರ್‌ಎಫ್ ತಂಡ , ಸುಬ್ರಹ್ಮಣ್ಯ ಮತ್ತು ಮಂಗಳೂರಿನಲ್ಲಿ ತಲಾ ಒಂದು ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಿಸುತ್ತಿದೆ. ನೆರೆ
ಸಂಭಾವ್ಯ ಗ್ರಾಮ ಪಂಚಾಯಿತಿಳಿಗೆ ತಲಾ 25 ಸಾವಿರ ರೂ.ಹಾಗೂ ಇತರ ಗ್ರಾಮ ಪಂಚಾಯಿತಿಗಳಿಗೆ ತಲಾ 15 ಸಾವಿರ ರೂ.ಅನುದಾನ ತುರ್ತು ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತೈಲ, ಅನಿಲ ಸಾಗಾಟ ಟ್ಯಾಂಕರ್ ಗಳ ಸಂಚಾರ ಹೆಚ್ಚಿರುವ ಶಿರಾಡಿ ಘಾಟಿಯ ಎರಡೂ ಕಡೆಗಳಾದ ಗುಂಡ್ಯ ಹಾಗೂ ಘಾಟಿಯ ಹಾಸನ ವ್ಯಾಪ್ತಿಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ತಂಡವನ್ನು ಇಡಲು ತೈಲ ಕಂಪೆನಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net