ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ವಾರದೊಳಗೆ ದುರಸ್ತಿ - ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ttttttttttt
Published on




ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಸಮರ್ಪಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ
ದಿನೇಶ್ ಗುಂಡೂರಾವ್ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಳೆಗಾಲದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು ‘ ಬಿಸಿ.ರೋಡ್-ಕಲ್ಲಡ್ಕ-ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಸ್ತಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು.ಮಳೆಯ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ವಾಹನಗಳು ಸುಗಮವಾಗಿ ಸಂಚರಿಸಲು ಸರ್ವಿಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ಮಳೆಯಿಂದ ಕಾಮಗಾರಿಗೆ ಹಾನಿಯಾದರೆ ಮತ್ತೆ ದುರಸ್ತಿ ಮಾಡಬೇಕು. ಮಳೆಗಾಲ ಪೂರ್ಣಗೊಳ್ಳುವವರೆಗೂ ಈ ಹೆದ್ದಾರಿ ಮೇಲೆ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಮಳೆಗಾಲದ ಮಾಹಿತಿ ಇದ್ದರೂ ಕಲ್ಲಡ್ಕ ಹೆದ್ದಾರಿಯಲ್ಲಿ ಚರಂಡಿ ನಿರ್ಮಾಣ ಮಾಡದೇ ಇರುವದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ದಿನೇಶ್ ಗುಂಡೂರಾವ್ ಆದ್ಯತೆಯಲ್ಲಿ ಕಾಮಗಾರಿ ನಡೆಸಲು ಸೂಚಿಸಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಅವರು ಕಲ್ಲಡ್ಕ ಪೇಟೆಯ ರಾಷ್ಟ್ರೀಯ ಹೆದ್ಧಾರಿಯಲ್ಲಿ ಸಂಚಾರ ತೀವ್ರ ದುಸ್ತರವಾಗಿದ್ದು ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ದೂರದ ಪರ್ಯಾಯ ಮಾರ್ಗದಲ್ಲಿ ಜನ ಸಂಚರಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಎಂಎಲ್‌ಸಿ ಹರೀಶ್‌ಕುಮಾರ್ ಮಾತನಾಡಿ ಪುಂಜಾಲಕಟ್ಟೆ - ಚಾರ್ಮಾಡಿ ಹೆದ್ದಾರಿ ವಿಸ್ತರಣೆಗೆ ಕಾಮಗಾರಿ ನಡೆಯುತ್ತಿದ್ದು ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದರು. ಈ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲು ಸೂಚಿಸಿದರು.
ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಹಾಕಿರುವ ಮಣ್ಣಿನಿಂದ ಮಳೆಗಾಲದಲ್ಲಿ ನದಿ ನೀರಿನ ಸುಗಮ ಹರಿವಿಗೆ ಅಡ್ಡಿಯಾಗಿದೆ. ಹಾಲಿ ಸೇತುವೆಗೆ ಅಪಾಯ ಸಾಧ್ಯತೆ ಇರುವುದರಿಂದ ಈ ಮಣ್ಣನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನವೀನ್ ಮಾತನಾಡಿ, ಈಗಾಗಲೇ ಕೂಳೂರು ಸೇತುವೆ ಮಣ್ಣನ್ನು ತೆರವುಗೊಳಿಸಲು ಕಾಮಗಾರಿ ನಡೆಯುತ್ತಿದೆ. ಕಲ್ಲಡ್ಕ ಹೆದ್ದಾರಿಯಲ್ಲಿ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಆದ್ಯತೆಯಲ್ಲಿ ಕೆಲಸ ನಡೆಯುತ್ತಿದೆ ಎಂದರು.
...............................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net