

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲಿನಿಂದ ಸಾವು ಪ್ರಕರಣ ಹೆಚ್ಚಾಗಿ ಸಂಭವಿಸುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಸುಳ್ಯ , ಬೆಳ್ತಂಗಡಿ, ಕುಕ್ಕೆ ಸುಬ್ರಹ್ಮಣ್ಯದ 4-5 ಜಾಗದಲ್ಲಿ ಮಿಂಚು ಪ್ರತಿಬಂಧಕ ಉಪಕರಣಗಳನ್ನು ಪ್ರಾಯೋಗಿಕವಾಗಿ ಜಿಲ್ಲಾಡಳಿತದ ವತಿಯಿಂದ ಅಳವಡಿಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ದೇವಸ್ಥಾನದ
ವತಿಯಿಂದ ಮಿಂಚು ಪ್ರತಿಬಂಧಕ ವ್ಯವಸ್ಥೆ ಅಳವಡಿಸಲಾಗಿದೆ. ಇದು 500 ಮೀಟರ್‌ನಿಂದ 1.5 ಕಿ.ಮೀ. ವ್ಯಾಪ್ತಿವರೆಗಿನ ಪ್ರದೇಶದಲ್ಲಿ ಮಿಂಚಿನಿಂದಾಗುವ ಅಪಾಯದಿಂದ ರಕ್ಷಣೆ ನೀಡಲಿದೆ ಎಂದರು.
*ವಿಪತ್ತು ನಿರ್ವಹಣೆಗೆ ಸನ್ನದ್ಧ
ಮಳೆಗಾಲದ ಸಂಭವನೀಯ ವಿಪತ್ತುಗಳನ್ನು ಎದುರಿಸಲು ಜಿಲ್ಲೆಯ ಎಲ್ಲ ಇಲಾಖೆಗಳು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದ ಸಿದ್ಧತೆಯ ಬಗ್ಗೆ ಎಲ್ಲ ತಾಲೂಕುಗಳಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ದ.ಕ.ಜಿಲ್ಲಾಡಳಿತವು ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಜಿಲ್ಲಾ ಮಟ್ಟದಲ್ಲಿ 17 ಕೋಟಿ ರೂ. ಹಾಗೂ ತಾಲೂಕು ಮಟ್ಟದಲ್ಲಿ 4 ಕೋಟಿ ರೂ. ಮೀಸಲಿರಿಸಿದ್ದು, ಹಣದ ಕೊರತೆ ಇಲ್ಲ. ಕಡಲ್ಕೊರೆತ ಸಮಸ್ಯೆಯ ತುರ್ತು ಬಳಕೆಗೆ ವಿಪತ್ತು ನಿಧಿಯ ಹಣ ಬಳಕೆ ಮಾಡುವಂತಿಲ್ಲ, ಅದಕ್ಕಾಗಿ ಸರ್ಕಾರದಿಂದಲೇ ಮೊತ್ತ ಒದಗಿಸುವ ಬಗ್ಗೆ ಹಣಕಾಸು ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಾಶ್ವತ ಪರಿಹಾರಕ್ಕೆ 80 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯೊಂದಕ್ಕೆ ಬಂದರು ಇಲಾಖೆ ಪ್ರಸ್ತಾವನೆ ಸಿದ್ಧಗೊಳಿಸಿದೆ ಎಂದು ಸಚಿವರು ತಿಳಿಸಿದರು.
*ರಸ್ತೆ ಸಂಚಾರ ಯೋಗ್ಯವಾಗಿಸಿ
ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಮಳೆಗಾಲದಲ್ಲಿ ಜನಸಾಮಾನ್ಯರ ಪ್ರಯಾಣಕ್ಕೂ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಮುಂದಿನ 3-4 ದಿನಗಳೊಳಗೆ ಸುಗಮ ವಾಹನ ಸಂಚಾರ ಯೋಗ್ಯವನ್ನಾಗಿಸಿಸಲು ರಾಷ್ಟ್ರೀಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಸುಮಾರು 12 ಕಿ.ಮೀ. ರಸ್ತೆಯೂ ನಾದುರಸ್ತಿಯಲ್ಲಿದ್ದು, ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
* ಅಕ್ರಮ ಮರಳುಗಾರಿಕೆಗೆ ತಡೆ
ಮರಳಿನ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ವಿಶೇಷ ಗಮನ ಹರಿಸುವಂತೆ ಸೂಚಿಸಲಾಗಿದೆ. ಅಕ್ರಮ ಮರಳುಗಾರಿಕೆ, ಸಾಗಾಟವನ್ನು
ತಡೆಯಲು ಸಾಕಷ್ಟು ಸಿಸಿ ಕ್ಯಾಮರ ಅಳವಡಿಸಿದರೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದಾದರೆ ಅದು ಜಿಲ್ಲಾಡಳಿತದ ವೈಫಲ್ಯ. ಹಾಗಾಗಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ದಿನೇಶ್ ಗುಂಡೂರಾವ್ ಹೇಳಿದರು.
ಪಟಾಕಿ ತಯಾರಿಕೆ ಮತ್ತು ಸಂಗ್ರಹಿಸುವ ದಾಸ್ತಾನು ಕೇಂದ್ರಗಳು ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿಯನ್ನು ಪಡೆದು
ನಿಯಮಬದ್ಧವಾಗಿ ಕಾರ್ಯನಿರ್ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಪಟಾಕಿ ಕೇಂದ್ರದಲ್ಲಿ ಸಂಭವಿಸಿದ ದುರಂತದಿಂದ ಸಾವು ಉಂಟಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅತೀ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಹರೀಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ
ಭರತ್ ಮುಂಡೋಡಿ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು.