

ಬೆಂಗಳೂರು/ಮಂಡ್ಯ: ವಿಧಾನಪರಿಷತ್ನ 25 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಸಲು ರಾಜಕೀಯ ಪಕ್ಷಗಳು ಕೊನೇ ಹಂತದ ಪ್ರಕ್ರಿಯೆ ನಡೆಸುತ್ತಿವೆ. ಇದೇ ವೇಳೆ ಕೆಲವು ಅಚ್ಚರಿ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಪ್ತ ಹಾಗೂ ವಿಶೇಷಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಚ್ಚಳವಾಗಿದೆ.
ವಿಶೇಷವೆಂದರೆ, ‘ಕಾಂಗ್ರೆಸ್-ಬಿಜೆಪಿ’ ಅನೌಪಚಾರಿಕ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಕರೆ ಮಾಡಿ ದಿನೇಶ್ ಗೂಳಿಗೌಡಗೆ ಅವಕಾಶ ಕೊಡಬೇಕೆಂಬ ಕೋರಿಕೆಗೆ ಮಾನ್ಯತೆ ಸಿಕ್ಕಿದ್ದು, ಅಧಿಕೃತ ಘೊಷಣೆಯಷ್ಟೇ ಬಾಕಿ ಉಳಿದಿದೆ. ಸೋಮಶೇಖರ್ ವಿಶೇಷ ಕರ್ತವ್ಯಾಧಿಕಾರಿಯಾಗುವ ಮುನ್ನ ದಿನೇಶ್ ಗೂಳಿಗೌಡ ಕಾಂಗ್ರೆಸ್ನಲ್ಲಿದ್ದರು. ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯವರಾದ ದಿನೇಶ್ ಅವರದ್ದು ರೈತ ಕುಟುಂಬ. ಎನ್ಎಸ್ಯುುಐ, ಯುವ ಕಾಂಗ್ರೆಸ್ನಲ್ಲಿದ್ದವರು. ಹಾಲಿ ಬಿಜೆಪಿಯಲ್ಲಿರುವ ಎಸ್.ಎಂ.ಕೃಷ್ಣ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಚೆಲುವರಾಯಸ್ವಾಮಿ ಸೇರಿ ಮಂಡ್ಯ ಜಿಲ್ಲೆಯ ಅನೇಕ ನಾಯಕರು ದಿನೇಶ್ ಗೂಳಿಗೌಡ ಅವರೇ ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ. 18 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಸರ್ಕಾರದಲ್ಲಿಯೂ ಸೇವೆ ಸಲ್ಲಿಸಿದ ಹಾಗೂ ವಿವಿಧ ಸಚಿವರ ಜತೆಗೆ 5 ವರ್ಷ ಕಾಲ ಕಾರ್ಯನಿರ್ವಹಿಸಿದ್ದಾರೆ.
ಕೈ ನಾಯಕರ ಅಚ್ಚರಿಯ ನಡೆ: ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನಿಂದ ಮಾಜಿ ಎಂಎಲ್ಸಿ ಬಿ.ರಾಮಕೃಷ್ಣ ಹಾಗೂ ಉದ್ಯಮಿ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿತ್ತು. ರಾಮಕೃಷ್ಣ ಹೆಸರು ಅಂತಿಮಗೊಳಿಸಲಾಗಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಕಳೆದ ವಿಧಾನಸಭೆ ಚುನಾವಣೆ ಸೋಲು ಹಾಗೂ 2023ರ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಕಾಂಗ್ರೆಸ್ ನಾಯಕರು, ಹಲವು ಸುತ್ತಿನ ಚರ್ಚೆ ಬಳಿಕ ದಿನೇಶ್ರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸಲಾಗಿದೆ. ಈಗಾಗಲೆ ಪಟ್ಟಿ ಸಿದ್ಧಗೊಂಡಿದ್ದು, ಒಂದೆರಡು ದಿನದಲ್ಲಿ ಬಿಡುಗಡೆಯಾಗಲಿದೆ.
| ಬಸವರಾಜ ಬೊಮ್ಮಾಯಿ ಸಿಎಂ
ಮಡಿಕೇರಿ: ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಹಾಸನ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಡಾ.ಮಂಥರ್ಗೌಡ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಟಿಕೆಟ್ ಖಾತ್ರಿ ಆಗುತ್ತಿದ್ದಂತೆ ಗುರುವಾರ ಕೊಡಗಿಗೆ ಆಗಮಿಸಿ, ಕಾಂಗ್ರೆಸ್ ಮುಖಂಡರೊಂದಿಗೆ ರ್ಚಚಿಸಿದ್ದಾರೆ. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಡಾ.ಮಂಥರ್ಗೌಡ ಟಿಕೆಟ್ ಕೋರಿ ಜಿಲ್ಲಾ ಕಾಂಗ್ರೆಸ್ಗೆ ಅರ್ಜಿ ಸಲ್ಲಿಸಿದ್ದರು. ಸ್ಥಳೀಯರೆಂಬ ಮಾನದಂಡದಡಿ ಲೋಕೇಶ್ಗೆ ಟಿಕೆಟ್ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿಗೆ ಶಿಫಾರಸು ಮಾಡಿತ್ತು. ಹಣ ಬಲ, ರಾಜಕೀಯ ಪ್ರಭಾವ ಗಮನದಲ್ಲಿಟ್ಟುಕೊಂಡು ಹೊರಗಿನ ಅಭ್ಯರ್ಥಿಯ ಸ್ಪರ್ಧೆಗೆ ವರಿಷ್ಠರು ಒಲವು ತೋರಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಭಾವ್ಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ‘ವಿಜಯವಾಣಿ’ಗೆ ಲಭ್ಯವಾದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ ಕ್ಷೇತ್ರಕ್ಕೆ ಪೈಪೋಟಿ ಹೆಚ್ಚಿದ್ದು, ವರಿಷ್ಠರ ತೀರ್ವನಕ್ಕೆ ಬಿಡಲು ಡಿಕೆಶಿ ಹಾಗೂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಸ್ಥಳೀಯ ಕ್ಷೇತ್ರದಿಂದ ಐವನ್ ಡಿಸೋಜ, ಕೃಪಾ ಅಮರ್ ಆಳ್ವ, ಮಂಜುನಾಥ ಭಂಡಾರಿ ನಡುವೆ ಜಿದ್ದಾಜಿದ್ದಿ ಪೈಪೋಟಿ ಇದೆ. ಹಾಗೆಯೇ ಧಾರವಾಡ ಕ್ಷೇತ್ರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಮೊಹಮದ್ ಇಸ್ಮಾಯಿಲ್ ನಡುವೆ ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ನಡೆದಿದೆ. ಅಚ್ಚರಿ ಎಂದರೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯಿಂದ ಯಾರೂ ಆಕಾಂಕ್ಷಿಗಳೇ ಮುಂದೆ ಬಂದಿಲ್ಲ.