

ಹಳೇಬೀಡು : ಇಲ್ಲಿನ ವಿಠ್ಠಲ ರಖುಮಾಯಿ ದೇಗುಲದಲ್ಲಿ ವಾರ್ಷಿಕ ದಿಂಡಿ ಉತ್ಸವ ಭಾನುವಾರ ವೈಭವದಿಂದ ಜರುಗಿತು.
ಉತ್ಸವದ ಪ್ರಯುಕ್ತ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಅನಂತರ ಪಂಢರಿ ಸಂಪ್ರದಾಯದಂತೆ ಜ್ಞಾನೇಶ್ವರೀ (ಪೋತಿ) ಗ್ರಂಥವನ್ನು ತಲೆಯ ಮೇಲೆ ಹೊತ್ತು ದೇಗುಲವನ್ನು ಮೂರು ಪ್ರದಕ್ಷಣೆ ಮಾಡಿದ ಭಕ್ತರು ಮಂಟಪದೊಳಗೆ ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಪೂಜೆ ಹಾಗೂ ಆರತಿಯನ್ನುಬೆಳಗಿದರು. ಜಾಗರಣೆ, ಅಖಂಡ ಭಜನೆ, ಪಾಳಿ ಭಜನೆ, ಭಾರೂಡ್, ಸಂತವಾಣಿ ಹಾಗು ವಿವಿಧ ಸಂಗೀತ ಕಾರ್ಯಕ್ರಮ ನೆರವೇರಿದವು.ದೇವರಿಗೆ ಹಾಗೂ ಜ್ಞಾನೇಶ್ವರಿ ಗ್ರಂಥಕ್ಕೆ ಕಾಕಡಾರತಿ ಸಮರ್ಪಿಸಿ, ಅರ್ಚಕರು ಹಾಗೂ ವಾರ್ಕರಿಗಳು ವಿವಿಧ ಪೂಜೆಗಳನ್ನು ಸಲ್ಲಿಸಿದರು. ಬಳಿಕ ರಾಜಬೀದಿ ಉತ್ಸವ ನಡೆಯಿತು. ಮಕ್ಕಳು ಕೃಷ್ಣ, ರುಕ್ಮಿಣಿ, ಹನುಮಂತ ಹಾಗು ಮತ್ತಿತರ ದೇವತೆಗಳ ವೇಷ ಧರಿಸಿ ಗಮನಸೆಳೆದರು.
ಆರತಿ, ಅಭಂಗಗಳನ್ನು ಹಾಡಿ ಮೂಲ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮುಖ್ಯ ಕೀರ್ತನಕಾರಕಾರದ ಶಿವಮೊಗ್ಗದ ಹನುಮಂತರಾವ್ ರಂಗಧೋಳ್, ತುಕಾರಾಮ ರಾವ್ ರಂಗಧೋಳ್, ಹೋಬಳಿ ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಬಿ.ಸಿ.ತುಕಾರಾಮ, ನಿರ್ದೇಶಕ ಬಾಬುರಾವ್, ಅಣ್ಣಪ್ಪ ರಾವ್, ಮಹಿಳಾ ಮಂಡಳಿಯ ರೂಪಾ ಹರೀಶ್, ಉಮಾರಾಣಿ, ರುಕ್ಮಿಣೀಬಾಯಿ ಮತ್ತಿತರರು ಇದ್ದ್ದರು.