

ವಿಜಯಪುರ: ಇಂಚಗೇರಿ ಸಂಪ್ರದಾಯದ ಮಠಗಳಲ್ಲೊಂದಾಗಿರುವ ಶ್ರೀಕ್ಷೇತ್ರ ಕೂಪಗಡ್ಡಿಯ ಶ್ರೀ ಸದ್ಗುರು ಸಮರ್ಥ ರಾಜಾ ರಾಮಚಂದ್ರರಾವ ಮಹಾರಾಜರ ಮಠದಲ್ಲಿ ಸದ್ಗುರು ರಂಗರಾವ ಮಹಾರಾಜರ 50ನೇ ವರ್ಷದ ಪುಣ್ಯತಿಥಿಯ ಸುವರ್ಣ ಮಹೋತ್ಸವ ಸಪ್ತಾಹದ ನಿಮಿತ್ತ ಜ. 6 ರಿಂದ 8ರವರೆಗೆ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಮೀಟಿಯ ಕೋಶಾಧ್ಯಕ್ಷ ಉದಯಕುಮಾರ ಚಟ್ಟರಕಿ ತಿಳಿಸಿದರು.
ಸದ್ಗುರು ರಾಜಾ ರಾಮಚಂದ್ರರಾವ ಮಹಾರಾಜರ ಹಾಗೂ ಸಂಗರಾವ ಮಹಾರಾಜರ ರಜತ ಮೂರ್ತಿಗಳ ದಿವ್ಯ ಆಗಮನದ ಪ್ರಯುಕ್ತ ಭವ್ಯ ದಿಂಡಿ ಪಾದಯಾತ್ರೆ ಹಿನ್ನೆಲೆ ನಡೆಯಲಿರುವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ. ಸದ್ಗುರು ಸಮರ್ಥ ರಾಮದಾಸ ಮಹಾರಾಜ ವಿರಚಿತ ಗ್ರಂಥರಾಜ ಶ್ರೀಮದ್ ದಾಸಬೋಧ, ಜುನಾ ದಾಸಬೋಧ ಗ್ರಂಥ, ಕುಬಗಡ್ಡಿ ಸಾಂಪ್ರದಾಯಿಕ ಭಜನೆ ಪುಸ್ತಕ ಹಾಗೂ ಶ್ರೀಮಠದ 2025ನೇ ಇಸ್ವಿಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಸಡಗರದಿಂದ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜ.6 ರಂದು ಶ್ರೀಸಮರ್ಥದ್ವಯರಿಗೆ ಮಹಾರುದ್ರಾಭಿಷೇಕ, ಬೆಳ್ಳಿಯ ಮೂರ್ತಿಗಳ ಮೆರವಣಿಗೆ, ಕುಂಭಮೇಳ ಹಾಗೂ ಸಕಲ ವಾದ್ಯ ಘೋಷಗಳೊಂದಿಗೆ ದಿಂಡಿ ಪಾದಯಾತ್ರೆ ದಾಸಬೋಧ ಸ್ಥಾಪನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತಿ ಸ್ವಾಮೀಜಿಗಳಿಂದ ಉಪನ್ಯಾಸ ನಡೆಯಲಿದೆ. ಸಚಿವ ಶಿವಾನಂದ ಪಾಟೀಲ ಭಾಗವಹಿಸಲಿದ್ದಾರೆ. ಸುನೀಲ ಬಾಬರ ಅವರಿಂದ ಕೀರ್ತನೆ ನಡೆಯಲಿದೆ ಎಂದರು.
ಜ. 7 ರಂದು ಹೆಬ್ಬಳ್ಳಿಯ ಚೈತನ್ಯ ಆಶ್ರಮದ ದತ್ತಾವಧೂತ ನೇತೃತ್ವದಲ್ಲಿ ಶ್ರೀರಾಮ ಜಯರಾಮ ಜಯಜಯರಾಮ 13 ಕೋಟಿ ಜಪ, ಸಾಂಗತಾ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ. ಜ್ಞಾನೇಶ್ವರ ವೀಣಾ ಪೂಜೆ, ಗ್ರಂಥರಾಜ ಶ್ರೀಮದ್ ದಾಸಬೋಧ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಶ್ರೀಕ್ಷೇತ್ರ ಚಿಮ್ಮಡದ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಹಾಗೂ ತುಕಾರಾಮ ಪವಾರ ಗುರೂಜಿ ಅವರಿಂದ ಶ್ರೀ ಜುನಾ ದಾಸಬೋಧ ಗ್ರಂಥ ಬಿಡುಗಡೆಗೊಳ್ಳಲಿದೆ. ರಾತ್ರಿ ಉಭಯ ಶ್ರೀಗಳಿಂದ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ಎಂದಿನಂತೆ ವಿವಿಧ ಧಾರ್ಮಿಕ ಕಾಯಕ್ರಮಗಳು ನೆರವೇರಲಿವೆ ಎಂದರು.
ಜ. 8 ರಂದು ಬೆಳಗ್ಗೆ ಸಮರ್ಥದ್ವಯರಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಲೋಕಾಪುರದ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿಗಳು ‘ಶ್ರೀಕ್ಷೇತ್ರ ಕೂಪಗಡ್ಡಿ ಸಾಂಪ್ರದಾಯಿಕ ಭಜನೆಯ ಪುಸ್ತಕ’ ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ಬಳಿಕ ವೀಣಾಪೂಜೆ, ಪುಷ್ಪವೃಷ್ಠಿ, ಭಜನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
ಪ್ರಮುಖರಾದ ಶ್ಯಾಮರಾವ ಜೋಶಿ, ರಘುನಾಥ ಜೋಶಿ, ತ್ರಿಂಬಕ ಕುಲಕರ್ಣಿ, ಸಂತೋಷ ಕುಲಕರ್ಣಿ, ಗಿರೀಶ ಜೋಶಿ ಹಾಗೂ ವಿಜಯ ಜೋಶಿ ಮತ್ತಿತರರಿದ್ದರು.