ದವಸ ಧಾನ್ಯ ತುಟ್ಟಿ ಗ್ರಾಹಕರಿಗೆ ಸಂಕಷ್ಟ

IMG_20231227_124609_16.jpg
Published on

ಹುಬ್ಬಳ್ಳಿ: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವ ಜನರಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.

ಒಂದೆಡೆ ಬರಗಾಲ ಈಗಾಗಲೇ ರೈತ ಸಮುದಾಯಕ್ಕೆ ಬರೆ ಎಳೆದಿದ್ದರೆ, ಇನ್ನೊಂದೆಡೆ ಬೆಲೆ ಏರಿಕೆಯು ಸಾಮಾನ್ಯ ಜನಜೀವನ ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ವರ್ಷದ ಕೊನೆಯ ತಿಂಗಳು ಡಿಸೆಂಬರ್ ಅಂತ್ಯದಲ್ಲಿ ಒಂದಿಷ್ಟು ಬೆಲೆಗಳು ಏರುಮುಖವಾಗಿವೆ. ಬರುವ ಜನೆವರಿಯಲ್ಲಿ ಇನ್ನಷ್ಟು ಏರಿಕೆಯಾಗುವ ಮುನ್ಸೂಚನೆಯನ್ನೂ ವ್ಯಾಪಾರಸ್ಥರು ನೀಡುತ್ತಿದ್ದಾರೆ.

ಇದರ ಮಧ್ಯೆ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಆದರೆ, ಏರಿಕೆಯಾಗುತ್ತಿರುವ ದರಗಳು ಗ್ರಾಹಕರ ಜೇಬಿಗೆ ಭಾರವಾಗುತ್ತಿವೆ.

ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ರವೆ, ಗೋದಿ ಹಿಟ್ಟು, ಬೇಸನ್ ಹೀಗೆ ಹಲವು ದಿನಸಿ ಪದಾರ್ಥಗಳ ಬೆಲೆ ಕಳೆದ ತಿಂಗಳಿಗಿಂತ ಹೆಚ್ಚಾಗಿವೆ. ಕಳೆದ ತಿಂಗಳಷ್ಟೇ ಸೋನಾ ಮಸೂರಿ ಅಕ್ಕಿ 50 ರೂ. ಇದ್ದದ್ದು ಈಗ 55ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಸಕ್ಕರೆ 40 ರೂ. ಗೆ ಕೆಜಿ ಇದ್ದದ್ದು ಈಗ 45 ರೂ. ತಲುಪಿದೆ. ಇನ್ನು ಬೆಲ್ಲ 42 ರೂ. ಇದ್ದದ್ದು 46ರಿಂದ 48 ರೂ. ವರೆಗೆ ಹೋಗಿದೆ. ಹೀಗೆ ಪ್ರತಿಯೊಂದು ದಿನಸಿ ವಸ್ತುವಿನ ಬೆಲೆಯಲ್ಲಿ ನಾಲ್ಕರಿಂದ ಐದು ರೂಪಾಯಿಯವರೆಗೂ ಅಧಿಕವಾಗಿದೆ.

ಬರಗಾಲದ ಹೊಡೆತ: ಈ ವರ್ಷ ಇಡೀ ರಾಜ್ಯವೇ ಬರಗಾಲದಿಂದ ತತ್ತರಿಸಿ ಹೋಗಿದೆ. ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದಾದ ಮುಂಗಾರು ಹಂಗಾಮು ಈ ಬಾರಿ ಕೈಕೊಟ್ಟಿದ್ದರಿಂದ ಸಹಜವಾಗಿ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಎಪಿಎಂಸಿಗೆ ಹೆಚ್ಚಿನ ಕೃಷಿ ಉತ್ಪನ್ನಗಳು ಬರಲಿಲ್ಲ. ಇದರ ಪರಿಣಾಮವಾಗಿ ರಾಜ್ಯದ ಆಂತರಿಕ ಬೇಡಿಕೆಯ ಪೂರೈಕೆಯೂ ಆಗುತ್ತಿಲ್ಲ.

ಇನ್ನು ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಮುಂಗಾರು ಅಷ್ಟಾಗಿ ಉತ್ತಮವಾಗಿರಲಿಲ್ಲ. ಇದೇ ಕಾರಣಕ್ಕೆ ಮುಂಗಾರಿನಲ್ಲಿ ಬೆಳೆಯಬಹುದಾದ ಹೆಸರು, ಉದ್ದು, ಶೇಂಗಾ, ಅಲಸಂದೆ, ಎಳ್ಳು ಇತ್ಯಾದಿಗಳ ದರಗಳು ಒಂದಿಷ್ಟು ಹೆಚ್ಚಾಗಿವೆ. ದವಸ ಧಾನ್ಯ ಮಾತ್ರವಲ್ಲ ತರಕಾರಿ ಸೇರಿ ಅನೇಕ ವಸ್ತುಗಳು ಕಳೆದ ತಿಂಗಳಿಗಿಂತ ತುಟ್ಟಿಯಾಗಿವೆ.

ಖಾದ್ಯ ತೈಲ ಅದರಲ್ಲೂ ಸೂರ್ಯಕಾಂತಿ ಎಣ್ಣೆಯ ದರ ಒಂದಿಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾಗಿ ಕರಿದ ಪದಾರ್ಥಗಳನ್ನು ತಿನ್ನಲು ಜನರು ಹಿಂದೆಮುಂದೆ ನೋಡುವ ಅಗತ್ಯ ಇಲ್ಲ.

ತತ್ತಿ ಬೆಲೆ: ಕೋಳಿ ಮೊಟ್ಟೆಯ ಬೆಲೆಯೂ ಏರಿಕೆಯಾಗಿದೆ. ದೀಪಾವಳಿ ಸಂದರ್ಭದಲ್ಲಿ 6 ರೂ.ಗೆ ಒಂದರಂತೆ ಮಾರಾಟವಾಗುತ್ತಿದ್ದ ಮೊಟ್ಟೆ ಈಗ 7ರೂ.ಗೆ ಹೆಚ್ಚಳವಾಗಿದೆ.

ಕೆಂಪು ಮೆಣಸಿನಕಾಯಿ ದರ ಇಳಿಕೆ:
ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಕೆಂಪು ಮೆಣಸಿನಕಾಯಿ ಉತ್ಪನ್ನ ಈ ಬಾರಿ ಕಡಿಮೆಯಾಗಿದೆ. ಆದರೆ, ಇದಕ್ಕೆ ಉತ್ತಮ ಬೆಲೆ ಸಿಗಬಹುದೆಂಬ ರೈತರ ನಿರೀೆ ಹುಸಿಯಾಗಿದೆ. ಗುಜರಾತ್ ಸೇರಿ ಅಕ್ಕಪಕ್ಕದ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬರುತ್ತಿರುವುದರಿಂದ ದರ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಪ್ರಸ್ತುತ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ದರ ಪ್ರತಿ ಕ್ವಿಂಟಾಲ್ಗೆ 20 ಸಾವಿರ ರೂ. ಆಸುಪಾಸಿನಲ್ಲಿದೆ. ಡಬ್ಬಿ, ಕಡ್ಡಿ ತಳಿಯ ಮೆಣಸಿನಕಾಯಿ ಇಲ್ಲಿ ಹೆಚ್ಚಾಗಿ ಮಾರಾಟವಾಗುತ್ತದೆ. ಕಳೆದ ವರ್ಷ ಮೆಣಸಿನಕಾಯಿ ದರ 30 ರಿಂದ 40 ಸಾವಿರ ರೂ.ವರೆಗೆ ಇತ್ತು.

ಕಡಿಮೆಯಾಗದ ದರ: ವಿಶೇಷವಾಗಿ ಈ ಭಾಗದ ಜನರ ಪ್ರಮುಖ ಆಹಾರದ ಬೆಳೆ ಜೋಳದ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕ್ವಿಂಟಾಲ್ಗೆ ಸಾಮಾನ್ಯವಾಗಿ 2 ಸಾವಿರ ರೂ. ಇರುತ್ತಿದ್ದ ಜೋಳದ ಬೆಲೆ ಈಗ 5 ಸಾವಿರ ರೂ. ತಲುಪಿದೆ. ಜತೆಗೆ ಗೋಧಿ ದರವೂ ಹೆಚ್ಚಳವಾಗಿರುವುದು ಜನರಿಗೆ ಪರ್ಯಾಯ ಆಹಾರವೇ ಇಲ್ಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net