ಶಿಕ್ಷಣ ಕಾಶಿಯಲ್ಲಿ ಉದ್ಯೋಗದ ವಿಚಾರಗಳೇ ಇಲ್ಲ : ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ ಹೇಳಿಕೆ

dinakar ullal
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನೈಋತ್ಯ ಕ್ಷೇತ್ರ ಶಿಕ್ಷಣ ಕಾಶಿಯಾಗಿ ಮುಂದುವರಿಯುತ್ತಿದೆಯೇ ಹೊರತು ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳು ಆರಂಭವಾಗುತ್ತಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ ಹೇಳಿದರು.

ಉಳ್ಳಾಲ ತಾಲೂಕು ಭಾಗದ ಮುಡಿಪು ಇನ್ಫೋಸಿಸ್ ಕಾರ್ಯಾಚರಣೆ ಸ್ಥಗಿತಗೊಳಿಸುವ ಲಕ್ಷಣಗಳಿವೆ. ವಿಪ್ರೋ ಜಾಗ ಖರೀದಿ ಮಾಡಿಟ್ಟಿದ್ದರೂ ಉದ್ಯಮ ಸ್ಥಾಪಿಸಲು ಮುಂದಾಗುತ್ತಿಲ್ಲ. ಎಂಆರ್‌ಪಿಎಲ್ ಸಂಪೂರ್ಣ ಗುತ್ತಿಗೆ ಆಧಾರದಡಿ ಕಾರ‌್ಯಾಚರಿಸುತ್ತಿದೆ. ಪದವೀಧರರ ನಿರುದ್ಯೋಗದ ಸಮಸ್ಯೆ ಜ್ವಲಂತ ಇದ್ದರೂ ವಿಧಾನಸಭೆಯಲ್ಲಿ ಚರ್ಚೆಗಳೇ ಆಗದೆ ಅನವಶ್ಯಕ ವಿಚಾರಗಳೇ ಮೇಳೈಸುತ್ತಿವೆ ಎಂದು ಕುತ್ತಾರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಣ, ಜಾತಿ, ಪ್ರಭಾವದಿಂದ ಈವರೆಗಿನ ಪದವೀಧರರ ಕ್ಷೇತ್ರದ ಅಭ್ಯರ್ಥಿಗಳು ಆಯ್ಕೆಗೊಂಡ ಪರಿಣಾಮ ಪದವೀಧರರ ಸಮಸ್ಯೆಗಳು ದುಪ್ಪಟ್ಟಾಗಿವೆ. ಸದ್ಯ ಪ್ರಜ್ಞಾವಂತರು ಚುನಾವಣೆ ಸ್ಪರ್ಧಿಸಿದಲ್ಲಿ ವಿಧಾನಸಭೆಯಲ್ಲಿ ನ್ಯಾಯದ ಪರ ಧ್ವನಿ ಎತ್ತಲು ಸಾಧ್ಯ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 15 ಲಕ್ಷ ಪದವೀಧರರಿದ್ದರೂ ಕೇವಲ 82,000 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಎರಡು ಪಕ್ಷಗಳಲ್ಲಿಯೂ ಬಂಡಾಯ ಇದ್ದು, ಪಕ್ಷೇತರನಾಗಿ ನಿಂತಿರುವ ನಾನು ಎಲ್ಲರಿಗೂ ಧ್ವನಿಯಾಗುವ ವಿಶ್ವಾಸ ನೀಡುತ್ತೇನೆ. ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ, ಪದವಿ ಪಡೆದವರು ವಿದೇಶ, ಹೊರ ಜಿಲ್ಲೆಗಳಿಗೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ವಿದೇಶಗಳಲ್ಲೂ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ಐಟಿ ಉದ್ಯಮವೂ ಶಾಶ್ವತವಲ್ಲ. ಯಾಂತ್ರಿಕ ಕೃಷಿಯತ್ತ ಪದವೀಧರರನ್ನು ಓಲೈಸುವ ಸಕಲ ಪ್ರಯತ್ನ ಮಾಡಬೇಕಿದೆ. ತಂಬಾಕು, ಮದ್ಯಸೇವನೆ ಯುವ ಸಮುದಾಯದಲ್ಲಿ ಹೆಚ್ಚಾಗುತ್ತಿದ್ದರೂ ಜಾಗೃತಗೊಳಿಸುವ ಕೆಲಸ ಆಗುತ್ತಿಲ್ಲ ಎಂದರು.

24 ವರ್ಷಗಳ ರಾಜಕೀಯ ಅವಧಿಯಲ್ಲಿ ಉಳ್ಳಾಲ ನಗರಸಭೆಯಲ್ಲಿ ಸಂವಿಧಾನಬದ್ಧವಾಗಿ ಆಡಳಿತ ನಡೆಸಿದ್ದೇನೆ. ಎಲ್ಲ ಧರ್ಮೀಯರನ್ನು ಜತೆಗೂಡಿಸಿ ಅಬ್ಬಕ್ಕ ಉತ್ಸವ ನಡೆಸುತ್ತಾ ಬಂದಿದ್ದು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿದ್ದಾರೆ. ಈವರೆಗೆ ವಿಧಾನಪರಿಷತ್ ಸದಸ್ಯರಾಗಿ ಶಿವಮೊಗ್ಗದವರೇ ಜಯಿಸುತ್ತಿದ್ದು, ಈ ಬಾರಿಯಾದರೂ ಮಂಗಳೂರಿನ ನಿವಾಸಿಯನ್ನು ಪದವೀಧರರು ಬೆಂಬಲಿಸಬೇಕಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಸದಸ್ಯರಾದ ಮುಷ್ತಾಕ್ ಪಟ್ಲ, ಅಬ್ದುಲ್ ಜಬ್ಬಾರ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net