

ಮಡಿಕೇರಿ: ನಗರದಲ್ಲಿ ಬಳಂಜಿ ವ್ಯಾಪಾರಕ್ಕೂ ಕರೊನಾ ಬಿಸಿ ತಟ್ಟಿದ್ದು, ಲಾಕ್‌ಡೌನ್‌ನಿಂದ ಬೇಡಿಕೆ ಕಡಿಮೆಯಾಗಿದೆ.
ಕಳೆದ ವರ್ಷ ಭರ್ಜರಿ ವ್ಯಾಪಾರ ನಡೆಸಿದ್ದ ಬಳಂಜಿ ವ್ಯಾಪಾರಿಗಳು ಪ್ರಸಕ್ತ ವರ್ಷದಲ್ಲಿ ಬಳಂಜಿ ಖಾಲಿ ಮಾಡಲು ಪರದಾಡುವಂತಾಗಿದೆ. ಕರೊನಾ ಕಾರಣಕ್ಕೆ ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಭೇಟಿ ನೀಡದ ಪರಿಣಾಮ ಬೇಡಿಕೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಮಳೆಗಾಲಕ್ಕೆ ಉತ್ತಮ: ಜಿಲ್ಲೆಯ ಎಲ್ಲೆಡೆ ಮೋಡ ಕವಿ ವಾತಾವರಣ, ತುಂತುರು ಮಳೆ ನಡುವೆ ಬಟ್ಟೆ ಒಣಹಾಕಲು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಮಡಿಕೇರಿಯಲ್ಲಿ ಸಾಧಾರಣ ಮಳೆಯೊಂದಿಗೆ ಮೈ ಕೊರೆಯುವ ಚಳಿಯ ವಾತಾವರಣವಿದ್ದು, ನಿತ್ಯ ಮಳೆಯಾಗುವುದರಿಂದ ನಗರದ ಜನ ಬಟ್ಟೆ ಒಣಗಿಸಲು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಕೊಡಗಿನಲ್ಲಿ ಹಿಂದಿನಿಂದಲೂ ಬಟ್ಟೆ ಒಣಗಿಸಲು ಗ್ರಾಮೀಣ ಜನರು ಕಂಡುಕೊಂಡಿದ್ದ ಬಳಂಜಿಗೆ ಈ ವರ್ಷ ಬೇಡಿಕೆ ಕಡಿಮೆಯಾಗಿದೆ. ನಗರದಲ್ಲಿ ಬಳಂಜಿ ವ್ಯಾಪಾರಿಗಳು ಮನೆಮನೆಗೆ ತೆರಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವ್ಯಾಪಾರಿ ಮಹೇಶ್ ಹೇಳುತ್ತಾರೆ.
ಬಿದಿರು ಸಿಗದೆ ಪರದಾಟ: ಬಿದಿರಿನಿಂದ ತಯಾರಿಸುವ ವಸ್ತುಗಳನ್ನು ತಮ್ಮ ಜೀವನದ ಸಾಂಪ್ರದಾಯಿಕ ಕುಲ ಕಸುಬು ಮಾಡಿಕೊಂಡಿರುವ ಗಿರಿಜನರು, ಕಾಡುಮೇಡು ಅಲೆದು ಬಿದಿರು ಸಂಗ್ರಹಿಸಿ, ಅದರಿಂದ ಅಗತ್ಯ ವಸ್ತುಗಳನ್ನು ತಯಾರಿಸುತ್ತಾರೆ. ನಂತರ ನಗರಗಳಿಗೆ ತೆರಳಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಈ ರೀತಿಯ ಗುಡಿ ಕೈಗಾರಿಕೆಯನ್ನು ಕುಶಾಲನಗರದ ಸಮೀಪ ಕೊಪ್ಪದಲ್ಲಿ ಕಾರ್ಮಿಕರು ಮಾಡುತ್ತಿದ್ದರೆ, ಮತ್ತೊಂದೆಡೆ ಬಳಂಜಿ ತಯಾರಿಸಲು ಬಿದಿರು ಸಿಗದೆ ಪರದಾಡುತ್ತಿದ್ದಾರೆ.
ಶತಮಾನಗಳಿಂದಲೂ ಬುಟ್ಟಿ ಹೆಣೆದು ಬದುಕುವ ಕೊರಗ ಮತ್ತು ಮೇದ ಜನಾಂಗ ಕೊಡಗು ಜಿಲ್ಲೆಯಲ್ಲೂ ನೆಲೆಸಿದ್ದು, ಅವರು ಗುಡಿ ಕೈಗಾರಿಕೆಯನ್ನು ನಡೆಸುತ್ತಾ ಬದುಕು ಕಂಡುಕೊಂಡಿದ್ದಾರೆ. ಆದರೆ, ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳ ತೀವ್ರ ಪೈಪೋಟಿಯಿಂದ ಗುಡಿ ಕೈಗಾರಿಕೆಗಳು ವಿನಾಶದ ಅಂಚು ತಲುಪುತ್ತಿವೆ ಎಂಬ ಕೊರಗು ಕಾಡುತ್ತಿದೆ. ತೀವ್ರ ಸ್ಪರ್ಧೆಯ ನಡುವೆ ಬೇಡಿಕೆಗೆ ಅನುಗುಣವಾಗಿ ಬಿದಿರು ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಬಿದಿರಿನ ಕಸುಬನ್ನು ನಂಬಿ ಬದುಕುತ್ತಿರುವ ಕೊರಗ ಮತ್ತು ಮೇದರ ವೃತ್ತಿ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ.
ಇಂದಿನ ತಾಂತ್ರಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಬಿದಿರಿನ ಬಳಕೆ ಕಡಿಮೆಯಾಗಿದೆ. ಬಿದಿರಿನ ವಸ್ತುಗಳ ಜಾಗಕ್ಕೆ ಪ್ಲಾಸ್ಟಿಕ್ ಮೊರ, ಬುಟ್ಟಿ, ಕುಕ್ಕೆ, ಮಂಕರಿ ಬಂದಿದ್ದು ತುಂಬಾ ಅಪಾಯಕಾರಿಯಾಗಿದೆ. ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಬಳಕೆ ಹಾನಿಕರ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಾದರೆ ಬಿದಿರಿನ ವಸ್ತುಗಳ ಬಳಕೆಗೆ ಸರ್ಕಾರ ಒತ್ತು ನೀಡಬೇಕಿದೆ. ಅಲ್ಲದೆ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೇದ ಜನಾಂಗವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರಿಯುವಂತೆ ಮಾಡುವತ್ತ ಸರ್ಕಾರ ಗಮನಹರಿಸಬೇಕಿದೆ.
1 ಬಿದಿರಿಗೆ 200 ರೂ.: ಬಿದಿರು ನಾಶವಾದ ಪರಿಣಾಮ ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ ಭಾಗಗಳಿಂದ ಖರೀದಿ ಮಾಡಿ ತರಲಾಗುತ್ತದೆ. ಒಂದು ಲೆಂತ್‌ಗೆ 200 ರೂ.ಸೇರಿದಂತೆ ಸಾಗಣೆ ವೆಚ್ಚ ಸೇರಿ ಸುಮಾರು 300 ರೂ.ಖರ್ಚಾಗಲಿದೆ. ಒಂದು ಬಳಂಜಿ ತಯಾರಿಸಲು 15 ಅಡಿ ಬಿದಿರು ಬೇಕಾಗುತ್ತದೆ. ಒಂದು ಪೂರ್ಣ ಬಿದಿರಿನಿಂದ ಕೇವಲ 3 ಬಳಂಜಿ ಮಾಡಬಹುದು. ಒಂದು ಬಳಂಜಿ 500-700 ರೂ.ಗಳಿಗೆ ಮಾರಾಟ ಮಾಡಿದರೆ ಕೂಲಿ ಕಳೆದು 150 ರೂ.ಸಿಗಲಿದೆ ಎಂದು ವ್ಯಾಪಾರಿ ಮಹೇಶ್ ಹೇಳುತ್ತಾರೆ.
ಬಿದಿರಿನಿಂದ ತಯಾರಿಸಲ್ಪಡುವ ವಸ್ತುಗಳು: ಬಿದಿರಿನಿಂದ ಬುಟ್ಟಿ, ಕೇರುವ ಮೊರ, ಕೊಳಲು, ಬೀಸಣಿಕೆ, ಹೂವಿನ ಬುಟ್ಟಿ, ಮಂಕರಿ(ಕುಕ್ಕೆ), ಚಾಪೆ, ಪೆಂಟೆ (ಹಳೆಯ ಕಾಲದ ಮಾಳಿಗೆ ಮನೆಗೆ ಮೇಲೆ ಹಾಕುವುದಕ್ಕೆ ಬಿದಿರಿನ ನಡುಚಾಪೆ) ತಡಿಕೆ ಗೋಡೆಗೆ ಒಳಭಾಗಕ್ಕೆ ಹಾಕುವ ಅಡ್ಡ ಚಾಪೆ ಸೇರಿದಂತೆ ಇತ್ಯಾದಿ ವಸ್ತುಗಳನ್ನು ತಯಾರಿಸಲಾಗುತ್ತದೆ.
ರೂ.400-700: ನಗರದಲ್ಲಿ ಇಂದು ಮಾರಾಟ ಮಾಡಲಾಗುತ್ತಿರುವ ದೊಡ್ಡ ಗಾತ್ರದ ಬಳಂಜಿಗೆ 700ರೂ., ಸಣ್ಣ ಗಾತ್ರದ ಬಳಂಜಿ 350-400 ರೂ.ಗಳಿಗೆ ಮಾರಾಟವಾಗುತ್ತಿದೆ.
ದಿನಕ್ಕೆ ಮೂರು ಬಳಂಜಿ ಕಟ್ಟಬಹುದು. ಬಿದಿರಿನ ಸಮಸ್ಯೆಯಿದ್ದು ಹಣಕೊಟ್ಟು ಬಿದಿರು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿದಿರನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮ್ಮ ಜೀವನ ಚಿಂತಾಜನಕ ಸ್ಥಿತಿಗೆ ತಲುಪಿದೆ. ಆದರೂ ಕುಲಸುಬು ಬಿಡಬಾರದು ಎಂಬ ನಿಟ್ಟಿನಲ್ಲಿ ಕುಶಾಲನಗರದ ಕೊಪ್ಪದಲ್ಲಿ ತಯಾರಿಸಿ ನಗರಕ್ಕೆ ಬಂದು ಮಾರಾಟ ಮಾಡಲಾಗುತ್ತಿದೆ. ಮಳೆಗಾಲ ಆರಂಭವಾದರೂ ಬಳಂಜಿಗೆ ಮಡಿಕೇರಿಯಲ್ಲಿ ಉತ್ತಮ ಬೇಡಿಕೆ ಇಲ್ಲದಿರುವುದು ಬೇಸರ ತರಿಸಿದೆ.
ಮಹೇಶ್, ವ್ಯಾಪಾರಿ
ಮಡಿಕೇರಿ ವ್ಯಾಪ್ತಿಯಲ್ಲಿ ಗಾಳಿ, ಮಳೆ ಹೆಚ್ಚಾಗಿರುತ್ತದೆ. ದಿನನಿತ್ಯ ಮೋಡ ಕವಿದ ವಾತಾವರಣ ಹಿನ್ನೆಲೆ ಬಟ್ಟೆ ಒಣಗಿಸಲು ಕಷ್ಟವಾಗುತ್ತದೆ. ಬಳಂಜಿ ಇದ್ದರೆ ಸಣ್ಣಮಕ್ಕಳ ಬಟ್ಟೆಯಿಂದ ಪ್ರತಿಯೊಬ್ಬರ ಬಟ್ಟೆ ಒಣಹಾಕಲು ಸಹಕಾರಿಯಾಗಿದೆ. ದುಬಾರಿಯಾದರೂ ಪ್ರಯೋಜನಕಾರಿ ವಸ್ತುವಾಗಿದೆ.
ಕೆ.ಎಸ್.ಶ್ವೇತಾ, ಗೃಹಿಣಿ