

ಮಡಿಕೇರಿ: ಯೋಗದಲ್ಲಿನ ಡಿಂಬಾಸನ ಭಂಗಿಯಲ್ಲಿ ೩೦ ನಿಮಿಷ ೫ ಸೆಕೆಂಡ್‌ಗಳ ಪ್ರದರ್ಶನದ ಮೂಲಕ ಮದೆನಾಡಿನ ವಿದ್ಯಾರ್ಥಿನಿ ಬಿ.ಕೆ.ಸಿಂಚನಾ ಗಿನ್ನೀಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಲು ಅರ್ಹತೆ ಪಡೆದಿದ್ದಾಳೆ.
ಕೊಡಗು ಪತ್ರಕರ್ತರ ಸಂಘ(ರಿ) ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿತ ವಿನೂತನ ಕಾರ್ಯಕ್ರಮದಲ್ಲಿ ಬಿ.ಸಿ.ಕೀರ್ತಿಕುಮಾರ್, ರೇಣುಕಾ ಅವರ ಪುತ್ರಿ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಒಳಪಟ್ಟ ಮದೆನಾಡು ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಕೆ.ಸಿಂಚನ ಈ ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಳು.
ಯೋಗಾಸನದ ಡಿಂಬಾಸನ ಭಂಗಿಯಲ್ಲಿ ಇಲ್ಲಿಯವರೆಗೆ ಆಸ್ಟ್ರೀಯಾದ ೩೨ ವರ್ಷದ ಸ್ಚೇಫಿನಿ ಮಿಲಿಂಗರ್ ಎಂಬ ಯೋಗಪಟು ೩೦ ನಿಮಿಷ ೩ ಸೆಕೆಂಟ್‌ಗಳ ಕಾಲ ಸ್ಥಿರವಾಗಿರುವ ಮೂಲಕ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದರು. ಈ ದಾಖಲೆಯನ್ನು ೨ ಸೆಕೆಂಡ್‌ಗಳಷ್ಟು ಉತ್ತಮ ಪಡಿಸುವ ಮೂಲಕ ಸಿಂಚನ ಇದೀಗ ಗಿನ್ನಿಸ್ ದಾಖಲೆಯ ಕದ ತಟ್ಟಿದ್ದಾಳೆ.
ಸಿಂಚನಳ ಯೋಗಾಸನದಲ್ಲಿನ ಈ ವಿಶಿಷ್ಟ ಸಾಧನೆ ಅಧಿಕೃತವಾಗಿ ಸದ್ಯದಲ್ಲಿಯೇ ಗಿನ್ನಿಸ್ ದಾಖಲೆ ಸೇರಲಿದೆ. ಈಕೆ ದಾಖಲೆಯ ಅವಧಿಯವರೆಗೆ ಡಿಂಬಾಸನ ಭಂಗಿಯಲ್ಲಿದ್ದು, ಹಳೆಯ ದಾಖಲೆಯನ್ನು ಮುರಿದ ಹಿನ್ನೆಲೆಯಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಘಟನೆಗಳು ಕಾರ್ಯಕ್ರಮದಲ್ಲಿ ಸಿಂಚನಾಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದವು.
ಪ್ರಶಾಂತ ಚಿತ್ತಕ್ಕೆ ಡಿಂಬಾಸನ ಸಹಕಾರಿ: ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಮಡಿಕೇರಿಯ ಯೋಗ ಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಡಿಂಬಾಸನ ಎನ್ನುವುದು ಚಕ್ರಾಸನದ ಮುಂದುವರೆದ ಭಾಗವೇ ಆಗಿದೆ. ಈ ಆಸನ ಪ್ರಶಾಂತ ಚಿತ್ತತೆಗೆ ಮತ್ತು ಬೆನ್ನು ಹುರಿ, ಕಾಲು , ಸೊಂಟದ ಭಾಗದ ಕೀಲುಗಳ ಆರೋಗ್ಯಕ್ಕೆ ಅತ್ಯಂತ ಪೂರಕವಾದುದುದೆಂದು ವಿವರಿಸಿದರು.
ದಾಖಲೆಯ ಆಸನ ಪ್ರದರ್ಶನದ ಬಳಿಕ ಮದೆ ಮಹೇಶ್ವರ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಬಿ.ಆರ್.ಜೋಯಪ್ಪ ಅವರು ಮಾತನಾಡಿ, ಎಳೆವೆಯ ಹಂತದಿಂದಲೆ ಅಮ್ಮ ಅಪ್ಪನ ಪ್ರೋತ್ಸಾಹದಿಂದ ಸಿಂಚನ ಇದೀಗ ವಿಶ್ವ ದಾಖಲೆಯನ್ನು ಮಾಡಿದ್ದಾಳೆ. ತಂದೆಯ ಬೆಂಬಲ, ಅಮ್ಮನ ತಾಳ್ಮೆಯ ಗುಣದಿಂದಾಗಿ ಇಂದು ಈಕೆ ಲೋಕ ವಿಖ್ಯಾತಿಗೆ ಪಾತ್ರಳಾಗಲು ಕಾರಣವಾಗಿರುವುದಾಗಿ ಅಭಿಪ್ರಾಯ ಪಟ್ಟರಲ್ಲದೆ, ಸಿಂಚನಳ ಯೋಗಸಾಧನೆಯ ಕುರಿತು ಕವನವೊಂದನ್ನು ವಾಚಿಸಿ ಗಮನ ಸೆಳೆದರು.
ನಿವೃತ್ತ ಆಕಾಶವಾಣಿ ಉದ್ಘೋಷಕರು ಹಾಗೂ ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ, ಇದೊಂದು ಅತ್ಯಂತ ಅಪೂರ್ವವಾದ ಕಾರ್ಯಕ್ರಮ ಮಾತ್ರವಲ್ಲ. ಇಡೀ ರಾಜ್ಯ ಮತ್ತು ದೇಶವೆ ಹೆಮ್ಮೆ ಪಡುವ ಗಳಿಗೆಯಾಗಿದೆ. ದೀಪಾ ಭಾಸ್ತಿ ಅವರು ಸಾಹಿತ್ಯಿಕ ನೆಲೆಯಲ್ಲಿ ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದರೆ, ಪುಟಾಣಿ ಸಿಂಚನ ಯೋಗದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿರುವುದು ಸಂತಸವನ್ನು ಉಂಟುಮಾಡಿದೆ ಎಂದರು.
ಸಿಂಚನಳ ಅಮ್ಮ ರೇಣುಕಾ ಮಾತನಾಡಿ, ಗಿನ್ನಿಸ್ ವಿಶ್ವ ದಾಖಲೆಯ ಪ್ರಯತ್ನವನ್ನು ಮಗಳು ಸಿಂಚನ ನಡೆಸಿ ಯಶಸ್ವಿಯಾಗಿರುವುದು ಸಂತಸವನ್ನು ತಂದಿದೆ. ಯೋಗ ಕೇವಲ ಪ್ರದರ್ಶನಕ್ಕಷ್ಟೆ ಸೀಮಿತವಾಗಬಾರದು. ಆರೋಗ್ಯಕ್ಕಾಗಿ ಯೋಗ ಮಾಡಬೇಕಾಗಿದೆಯೆಂದು ಅಭಿಪ್ರಾಯಪಟ್ಟರು. ಮಗಳ ಯೋಗದಾಖಲೆಗೆ ಸಹಾರ ನೀಡಿದ ಕೊಡಗು ಪತ್ರಕರ್ತರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಘಟನೆಗಳಿಗೆ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ.ಅನಿಲ್, ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ಕುಡೆಕಲ್ ಸಂತೋಷ್, ಸಿಂಚನಳ ದಾಖಲೆಯ ಯೋಗ ಪ್ರದರ್ಶನಕ್ಕೆ ಯೋಗಪಟು ರಾಜೇಶ್ ಗುಪ್ತ, ವಾಂಡರಸ್ಸ್ ಕ್ಲಬ್‌ನ ಬಾಬು ಸೋಮಯ್ಯ, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಹಾಜರಿದ್ದರು.