

ಬೆಂಗಳೂರು ಗ್ರಾಮಾಂತರ: ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಓದುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಸಾಧನೆ ಶಿಖರ ತಲುಪಬಹುದೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಒಬ್ಬ ವಿದ್ಯಾರ್ಥಿನಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಪರಿಭಾವಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ತಿಳಿಹೇಳಿ, ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮಾತನಾಡಿ, ಪ್ರತಿಯೊಬ್ಬರಲ್ಲೂ ವೈಯಕ್ತಿಕ ಭಿನ್ನತೆ ಇದೆ. ಎಲ್ಲರೂ ಒಂದೊಂದು ವಿಭಾಗದಲ್ಲಿ ಬುದ್ಧಿವಂತರಾಗಿರುತ್ತಾರೆ. ಯಾರೊಬ್ಬರೂ ಬೇರೆಯವರನ್ನು ಹೋಲಿಕೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಹೆಣ್ಣು ಮಕ್ಕಳನ್ನು ಪೋಷಿಸುವ ಹಾಗೂ ಅವರಿಗಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ ಹೆಣ್ಣು ಮಕ್ಕಳಿಗೆಂದೇ ಇರುವ ವಿವಿಧ ಯೋಜನೆಗಳ ಹಣಕಾಸು ನಿಧಿ ಬಗ್ಗೆ ತಿಳಿಸುವುದರೊಂದಿಗೆ ವೈಯಕ್ತಿಕ ಸ್ವಚ್ಛತೆ ಕುರಿತು ಜಾಗೃತರಾಗಬೇಕು ಎಂದು ತಿಳಿಸಿದರು.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಹ್ವಾನಿಸಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯ ವಿವಿಧ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ 27 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ, ಜಿಲ್ಲಾ ವಿಷಯ ಪರಿವೀಕ್ಷಕರಾದ ಶ್ರೀಕಂಠಯ್ಯ, ಶ್ರೀನಿವಾಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಗೆ ಸಿಇಒ ಪಟ್ಟ: ಕೋನಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ ಅವರನ್ನು ಒಂದು ದಿನದ ಮಟ್ಟಿಗೆ ಜಿಒಂ ಸಿಇಒ ಆಗಿ ನೇಮಿಸಲಾಗಿತ್ತು. ನಿಯಮದಂತೆ ರಶ್ಮಿತಾ ಕಾರ್ಯನಿರ್ವಹಿಸಿದರು.