ಸಾಧನೆಗೆ ಶ್ರದ್ಧೆ, ಸಂಕಲ್ಪ ಮುಖ್ಯ

11TKE 1,1 (1)
Published on

ತರೀಕೆರೆ: ನಾಡೋಜ ಗೊರುಚ ಅವರ ಸಾಧನೆ ಜನಮಾನಸದಲ್ಲಿ ಉಳಿಯಬೇಕಾದರೆ ರಾಜಧಾನಿ, ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಅವರ ಪುತ್ಥಳಿ ಅನಾವರಣ ಮಾಡಬೇಕು ಎಂದುಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗೊಂಡೆದಹಳ್ಳಿ ಗ್ರಾಮದಲ್ಲಿ ನಾಡೋಜ ಗೊ.ರು.ಚನ್ನಬಸಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿ, ಗೊರುಚ ಅವರ ಅದ್ಭುತ ಸಮಾಜಮುಖಿ ಚಿಂತನೆಗಳನ್ನು ಸಂಘ ಸಂಸ್ಥೆಗಳು ಅನುಸರಿಸಿ ಕಾರ್ಯರೂಪಕ್ಕೆ ತರಬೇಕು. ಅವರು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ತರೀಕೆರೆ ತಾಲೂಕಿನ ಹಿರಿಮೆ, ಗೌರವ ಹೆಚ್ಚಿದಂತಾಗಿದೆ ಎಂದರು.

ಡಾ.ಗೊ.ರು.ಚನ್ನಬಸಪ್ಪ ಹುಟ್ಟೂರಿನ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜನತೆ ನನ್ನ ಕಲೆ, ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರಿಂದ ಇಂಥ ಸ್ಥಾನಮಾನ ಗೌರವ ಸಿಕ್ಕಿದೆ. ಬರೀ ಮಾತಿನಿಂದ ಸಾಧನೆ ಸಾಧ್ಯವಾಗದು. ಸಾಧನೆಗೆ ಮನಪೂರ್ವಕ ಶ್ರದ್ಧೆ, ಕಾರ್ಯರೂಪಕ್ಕೆ ತರುವ ಸಂಕಲ್ಪ ಮುಖ್ಯ ಎಂದರು.

ನಮ್ಮ ಕಲೆ, ಸಾಹಿತ್ಯ ಸಂಸ್ಕೃತಿ ಉಳಿಯಬೇಕಾದರೆ ಯುವ ಬರಹಗಾರರು, ಸಾಹಿತಿಗಳಿಗೆ ಉತ್ತೇಜನ ನೀಡಬೇಕು. ನಮ್ಮ ಮೂಲ ಗ್ರಾಮೀಣ ಸೊಗಡಿನ ಸಾಹಿತ್ಯ, ಕಲೆ ನಶಿಸದಂತೆ ನೋಡಿಕೊಳ್ಳಬೇಕು. ನಾನು ಎಂದಿಗೂ ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಬಿದ್ದವನಲ್ಲ. ನನ್ನ ಕಾರ್ಯ ಕಲೆ, ಸಾಹಿತ್ಯ ಜೀವಂತಗೊಳಿಸಲು ಮಾತ್ರ ಗೊಂಡೆದಹಳ್ಳಿ ಗ್ರಾಮದ ಗೊರುಚ ಗ್ರಾಮ ವಿಕಾಸ ಪ್ರತಿಷ್ಟಾನ ಪ್ರಾಮಾಣಿಕ ಕೆಲಸ ನಿರ್ವಹಿಸುತ್ತಿದ್ದು, ಅದರ ಉದ್ದೇಶ ಈಡೇರಿ ಎಲ್ಲೆಡೆ ಮಾದರಿಯಾಗಬೇಕು. ಸಾಧನೆ ಮತ್ತು ಸೇವೆಗೆ ಗೌರವ ಸ್ಥಾನಮಾನ ಸಿಕ್ಕಿದೆ. ಹುಟ್ಟೂರಿನ ಜನರ ಅಭಿಮಾನ ಹೃದಯ ತುಂಬಿ ಬಂದಂತಿದೆ ಎಂದು ಭಾವುಕತೆಯಿಂದ ಹೇಳಿದರು.

ಹುಣಸಘಟ್ಟ ಗುರು ಹಾಲುಸ್ವಾಮಿ ಮಠದ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ.ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಲೆಪ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಗೊರುಚ ಗ್ರಾಮ ವಿಕಾಸ ಪ್ರತಿಷ್ಟಾನದ ಅಧ್ಯಕ್ಷ ಚಿಕ್ಕರಿಯಪ್ಪ, ಕಾರ್ಯದರ್ಶಿ ಜಿ.ಎಸ್.ಮೋಹನ್‌ಕುಮಾರ್, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net