

ನರಗುಂದ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ' ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವು ಭಾನುವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪೀಕಲಾಟಕ್ಕೆ ಸಿಲುಕಿಸಿತು.
ಕಾರ್ಯಕ್ರಮದ ಹಿನ್ನೆಲೆ ಶಾಸಕ ಸಿ.ಸಿ. ಪಾಟೀಲ ಅವರಿಗೆ ನರಗುಂದದ ಸಾರಿಗೆ ಘಟಕದ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಹಾಗೂ ಸಿಬ್ಬಂದಿ ಶನಿವಾರ ಆಹ್ವಾನ ನೀಡಿದ್ದರು. ಸಮಾರಂಭಕ್ಕೆ ಬರಲು ಶಾಸಕರೂ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
ಆದರೆ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ್ ಹಾಗೂ ಅವರ ಬೆಂಬಲಿಗರು ನಿಗದಿತ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸುದ್ದಿ ತಿಳಿದು ಶಾಸಕರು ಕಾರ್ಯಕ್ರಮಕ್ಕೆ ಗೈರಾದರು.
ಪುರಸಭೆಯ ೨೩ ಸದಸ್ಯರ ಹೆಸರುಗಳನ್ನು ಕೂಗಿ ವೇದಿಕೆಗೆ ಆಹ್ವಾನಿಸಿದರೂ ಯಾರೊಬ್ಬರೂ ವೇದಿಕೆ ಮೇಲೆ ಹತ್ತಲಿಲ್ಲ. ಮಾಜಿ ಶಾಸಕ ಬಿ.ಆರ್. ಯಾವಗಲ್ಲ್ ಹಾಗೂ ಅವರ ಬೆಂಬಲಿಗರನ್ನು ವೇದಿಕೆಗೆ ಆಹ್ವಾನಿಸದ ಡಿಪೋ ಮ್ಯಾನೇಜರ್ ಪ್ರಶಾಂತ ಪಾನಬುಡೆ, ತಾವೊಬ್ಬರೇ ವೇದಿಕೆಯಲ್ಲಿ ಕುಳಿತು ಕಾರ್ಯಕ್ರಮ ನಡೆಸಿಕೊಟ್ಟರು. ಇದು ಅಲ್ಲಿದ್ದ ಮಾಜಿ ಶಾಸಕರ ಬೆಂಬಲಿಗರಿಗೆ ಇರಿಸು ಮುರಿಸು ತರಿಸಿತು.
ಬಳಿಕ ನರಗುಂದ- ಗದಗ ಹಾಗೂ ಹುಬ್ಬಳ್ಳಿಗೆ ತೆರಳುವ ಬಸ್‌ಗಳಿಗೆ ಚಾಲನೆ ನೀಡುವಂತೆ ಅಧಿಕಾರಿಗಳು ಮಾಜಿ ಶಾಸಕ ಬಿ.ಆರ್. ಯಾವಗಲ್ಲ್ ಅವರನ್ನು ಆಹ್ವಾನಿಸಿದರು.
ನಮ್ಮಿಂದ ನಿಮಗೆ ಸಮಸ್ಯೆ ಉಂಟಾಗುತ್ತದೆ. ಚಾಲನೆ ನೀಡುವುದು ದೊಡ್ಡ ವಿಚಾರವಲ್ಲ. ಅದನ್ನು ನೀವೇ ಮಾಡಿ' ಎಂದು ಯಾವಗಲ್ಲ್ ವಿನಮ್ರವಾಗಿ ಹೇಳಿದರು. ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ಜತೆಗೆ ಮೈಸೂರ್ ಪಾಕ್ ನೀಡಿ, ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಜತೆಗೆ ಚಾಲಕ ಮತ್ತು ನಿರ್ವಾಹಕರು ಸೌಜನ್ಯದಿಂದ ವರ್ತಿಸÀಬೇಕು. ಮಹಿಳೆಯರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಮುಂತಾದ ದಾಖಲಾತಿಗಳನ್ನು ನೀಡಿ, ತೆರಳಬೇಕಿರುವ ಸ್ಥಳದ ಮಾಹಿತಿ ನೀಡಿ ಟಿಕೆಟ್ ಕೇಳಿ ಪಡೆದುಕೊಳ್ಳಬೇಕು. ಬಸ್‌ನಲ್ಲಿರುವ ಶೇ.೫೦ರಷ್ಟು ಆಸನಗಳಲ್ಲಿ ಪುರುಷರಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಪ್ರವೀಣ ಯಾವಗಲ್ಲ್, ಪ್ರಕಾಶ ಹಡಗಲಿ, ವಿಠ್ಠಲ ಶಿಂಧೆ, ಎಂ.ಬಿ. ಅರಹುಣಸಿ, ವೀರೇಶ ಚುಳಕಿ, ರಾಜು ಕಲಾಲ, ವಿಠ್ಠಲ ತಿಮ್ಮರಡ್ಡಿ, ಉದಯ ಮುಧೋಳೆ, ಗುರುಪಾದಪ್ಪ ಕುರಹಟ್ಟಿ, ಎಸ್.ಎಫ್. ಹೂಗಾರ, ನಾಗರಾಜ, ಮಾದಪ್ಪನವರ, ನೀಲಪ್ಪ ಗುಡದನ್ನವರ, ಐ.ಪಿ. ಚಂದೂನವರ, ಇತರರಿದ್ದರು.