ಶಿಥಿಲಾವಸ್ಥೆಯಲ್ಲಿ ಪಶು ಚಿಕಿತ್ಸಾಲಯ

24LNG01-A
ಲಿಂಗಸುಗೂರು ಸಮೀಪದ ಈಚನಾಳ ಗ್ರಾಮದ ಪಶು ಚಿಕಿತ್ಸಾಲಯ ಕಚೇರಿ ಹೊರನೋಟ.
Published on

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಕಳೆದ ಐದಾರು ದಶಕಗಳ ಹಿಂದೆ ನಿರ್ಮಿಸಿದ ಪಶು ಚಿಕಿತ್ಸಾಲಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಎದುರಾಗಿದೆ.

ಪಶುಚಿಕಿತ್ಸಾಲಯ ಕಟ್ಟಡ ಕೇವಲ ಎರಡು ಕೋಣೆಗಳನ್ನು ಹೊಂದಿದ್ದು, ಒಂದು ಕೊಠಡಿಯಲ್ಲಿ ವೈದ್ಯರ ಕಚೇರಿ, ಇನ್ನೊಂದರಲ್ಲಿ ಔಧ ಸಲಕರಣೆಗಳನ್ನಿಡಲು ಜಾಗದ ಕೊರತೆಯಿದೆ. ಛಾವಣಿ ಸಿಮೆಂಟ್ ಪದರು ಕಿತ್ತು ಹೋಗಿ ಕಬ್ಬಿಣದ ಸರಳುಗಳು ತೇಲಿವೆ. ಮಳೆ ಬಂದರೆ ಸೋರುತ್ತದೆ. ಚಿಕಿತ್ಸಾಲಯ ವ್ಯಾಪ್ತಿಯ ಹಳ್ಳಿಗಳ ನೂರಾರು ಜಾನುವಾರುಗಳಿಗೆ ತಪಾಸಣೆ, ಚಿಕಿತ್ಸೆ ನೀಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸದಾಗಿ ಪಶು ಚಿಕಿತ್ಸಾಲಯ ಕಟ್ಟಡ ಮತ್ತು ಆವರಣದಲ್ಲಿ ಚಿಕಿತ್ಸೆಗಾಗಿ ಬರುವ ಜಾನುವಾರುಗಳಿಗೆ ಪಶು ಸಲಕರಣೆಗಳ ಅಳವಡಿಕೆಗೆ ಕನಿಷ್ಠ 100/100 ಅಡಿ ಜಾಗದ ಅವಶ್ಯಕತೆಯಿದ್ದು, ಈಗಿರುವ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಸೌಲಭ್ಯ ಕಲ್ಪಿಸಲು ಜಾಗದ ಅಭಾವ ಎದುರಾಗಲಿದೆ.

ಇದನ್ನು ಮನಗಂಡು ಲಿಂಗಸುಗೂರು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು 2022ರ ನ.11ರಂದು ಅಂದಿನ ತಹಸೀಲ್ದಾರ್‌ಗೆ ಪತ್ರ ಬರೆದು ಈಚನಾಳ ಗ್ರಾಪಂ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಗಾಂವ್‌ಠಾಣಾದಲ್ಲಿ ನಿವೇಶನ ಲಭ್ಯವಿಲ್ಲವೆಂದು ತಿಳಿಸಿದ್ದು, ಈಚನಾಳ ಸರ್ವೇ ನಂ.32 ಹಿಸ್ಸಾ 2 ರಲ್ಲಿ 24.03 ಎಕರೆ ಸರ್ಕಾರಿ ಜಮೀನು ಇದೆ. ಇಲ್ಲಿ ಪಶುವೈದ್ಯ ಕೇಂದ್ರ ಕಟ್ಟಡ ನಿರ್ಮಿಸಲು 100/100 ಅಡಿ ನಿವೇಶನ ಇಲಾಖೆಗೆ ನೀಡುವಂತೆ ಮನವಿ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಜಾನುವಾರುಗಳು ಸಾಕಣೆ ಮಾಡುತ್ತಿದ್ದು, ಜಾನುವಾರುಗಳಿಗೆ ರೋಗಗಳು ಕಂಡು ಬಂದರೆ ಸಮಯಕ್ಕೆ ಸರಿಯಾಗಿ ತಪಾಸಣೆ, ಔಷಧೋಪಚಾರ, ಚಿಕಿತ್ಸೆ ನೀಡಲು ಸುಸಜ್ಜಿತ ಕಟ್ಟಡ, ಆವರಣ, ಸಲಕರಣೆಗಳ ಅನುಕೂಲ ಕಲ್ಪಿಸಿದರೆ ಜಾನುವಾರುಗಳ ರಕ್ಷಣೆ ಸಾಧ್ಯವಾಗಲಿದೆ. ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಈಚನಾಳ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಿಸಲು ಅಗತ್ಯ ಸರ್ಕಾರಿ ನಿವೇಶನ ನೀಡಬೇಕೆಂಬುದು ಗ್ರಾಮಸ್ಥರ ಒತ್ತಾಯ.

ಪಶು ವೈದ್ಯ, ಈಚನಾಳಡಾ.ಮಹೇಶಪಶು ಚಿಕಿತ್ಸಾಲಯ ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿ ಮಳೆ ಬಂದರೆ ಸೋರುತ್ತದೆ. ಇಲಾಖೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಿದೆ. ಆದರೆ, ಜಾಗದ ಕೊರತೆಯಿಂದ ವಿಳಂಬವಾಗುತ್ತಿದೆ. ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿ, ಲಿಂಗಸುಗೂರುಡಾ.ರಾಚಪ್ಪಈಚನಾಳ ಗ್ರಾಮದ ಪಶು ಚಿಕಿತ್ಸಾಲಯ ಶಿಥಿಲಾವಸ್ಥೆಗೆ ತಲುಪಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲು ಗ್ರಾಪಂಗೆ ಪತ್ರ ಬರೆಯಲಾಗಿತ್ತು. ಆದರೆ ಗಾಂವ್‌ಠಾಣಾದಲ್ಲಿ ಜಾಗ ಲಭ್ಯವಿಲ್ಲವೆಂದು ಹೇಳಿದ್ದರಿಂದ ತಹಸೀಲ್ದಾರ್‌ಗೆ ಸರ್ಕಾರಿ ಭೂಮಿಯಲ್ಲಿ ನಿವೇಶನ ನೀಡಲು ಈಗಾಗಲೇ ಪತ್ರ ಬರೆದು ಮನವಿ ಮಾಡಲಾಗಿದೆ. ಮತ್ತೊಮ್ಮೆ ತಹಸೀಲ್ದಾರ್ ಗಮನಕ್ಕೆ ತರಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net