ಪ್ರವಾಸಿ ಮಂದಿರಕ್ಕೆ ಜಾಗದ ತಕರಾರು : ಅತಂತ್ರ ಸ್ಥಿತಿಯಲ್ಲಿ ಕಡಬದ ಟೂರಿಸ್ಟ್ ಕಟ್ಟಡ : ತೆರವಾಗಿಲ್ಲ ಪಾಳುಬಿದ್ದ ಹಳೇ ಬಂಗಲೆ

2
Published on

ಪ್ರವೀಣ್‌ರಾಜ್ ಕೊೈಲ

ಕಡಬ ಪೇಟೆಯ ಹೃದಯ ಭಾಗದಲ್ಲಿರುವ ಶಿಥಿಲಗೊಂಡ ಪ್ರವಾಸಿ ಮಂದಿರ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಹೊಸ ಪ್ರವಾಸಿ ಬಂಗಲೆ ನಿರ್ಮಿಸಲು ಸೂಕ್ತ ಜಾಗ ಇನ್ನೂ ನಿಗದಿಯಾಗಿಲ್ಲ.

ಶಿಥಿಲಗೊಂಡ ಈ ಪ್ರವಾಸಿ ಮಂದಿರಕ್ಕೆ ಐದು ದಶಕಗಳ ಇತಿಹಾಸವಿದೆ. ಕಟ್ಟಡ ಅಂದಿನ ಡಿಸ್ಟ್ರಿಕ್ಟ್ ಬೋರ್ಡ್ ಅಧ್ಯಕ್ಷರ ಹೆಸರಿನಲ್ಲಿದೆ. 0.34 ಎಕರೆ ಜಾಗ ಇದರಲ್ಲಿದೆ. ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆಯಿದ್ದು ಆಸ್ಪತ್ರೆ ಆರಂಭದ ಸಂದರ್ಭ ಈ ಬಂಗಲೆ ವೈದ್ಯಾಧಿಕಾರಿಗಳ ವಸತಿ ಗೃಹವಾಗಿತ್ತು. ಆರೋಗ್ಯ ಇಲಾಖೆ ಪಹಣಿ ಪತ್ರದಲ್ಲಿರುವ ಜಾಗದಲ್ಲಿ ಈ ಕಟ್ಟಡವಿದ್ದು, ಪುತ್ತೂರು ಬಿಡಿಓ ಕಚೇರಿ ಮುಖಾಂತರ ಇದರ ನಿರ್ವಹಣೆ ನಡೆಯುತ್ತಿತ್ತು. ಎರಡು ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಪ್ರವಾಸಿ ಮಂದಿರವಾಗಿ ಪರಿವರ್ತಿಸಲಾಯಿತು. ಬಳಿಕ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು.

1995ರಲ್ಲಿ ಅಸ್ತಿತ್ವಕ್ಕೆ ಬಂದ ಪುತ್ತೂರು ತಾಲೂಕು ಪಂಚಾಯಿತಿ ಈ ಪ್ರವಾಸಿ ಮಂದಿರದ ನಿರ್ವಹಣಾ ಜವಾಬ್ದಾರಿ ವಹಿಸಿಕೊಂಡುತಿಂಗಳಿಗೆ ಹತ್ತು ಸಾವಿರ ರೂ.ಮೀಸಲಿರಿಸಿತ್ತು. ತಿಂಗಳಿಗೆ 700ರೂ.ಸಂಬಳ ನಿಗದಿ ಮಾಡಿ ಸಿಬ್ಬಂದಿ ನೇಮಕ ಮಾಡಲಾಯಿತು. ಕೆಲವು ಸಮಯ ಸುಸೂತ್ರವಾಗಿ ಮುಂದುವರಿಯಿತು. ಬಳಿಕ ಆಡಳಿತಕ್ಕೆ ಬಂದ ತಾಲೂಕು ಪಂಚಾಯಿತಿ ಆಡಳಿತ ಮಂಡಳಿ ಪ್ರವಾಸಿ ಮಂದಿರ ನಿರ್ವಹಣೆ ಕೈ ಬಿಟ್ಟಿತು. ನಿರ್ವಹಣೆಗೆಂದು ಕೊಡುತ್ತಿದ್ದ ಹಣ ಕಡಿತ ಮಾಡಿತು. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಿಂದ ಪಾವತಿಸುತ್ತಿದ್ದ ವಿದ್ಯುತ್ ಕರವನ್ನು ನಿಲ್ಲಿಸಿತು. ಸಿಬಂದಿ ವೇತನ ಸ್ಥಗಿಗೊಳಿಸಿತು. ಬಳಿಕ ಗ್ರಾಮ ಪಂಚಾಯಿತಿಗೆ ಇದರ ಜವಾಬ್ದಾರಿ ಅಧಿಕೃತವಾಗಿ ಹಸ್ತಾಂತರಿಸುವ ಕಾರ್ಯ ಕೂಡ ನಡೆಯದೆ ಕಟ್ಟಡ ಅನಾಥವಾಯಿತು.

ಜಾಗ ಆಸ್ಪತ್ರೆಗೆ ಬಿಟ್ಟುಕೊಡಲು ಆಗ್ರಹ

ಈಗಾಗಲೇ ಅನಾಥ ಸ್ಥಿತಿಯಲ್ಲಿರುವ ಪ್ರವಾಸಿ ಮಂದಿರ ದುರಸ್ತಿಗೊಳಿಸುವ ಸಲುವಾಗಿ ಕೆಲವು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಆಗಮಿಸಿ ಪರಿಶೀಲಿಸಿ ಕಟ್ಟಡ ದುರಸ್ತಿಗೆ ಯೋಗ್ಯವಲ್ಲ ಎಂದು ವರದಿ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಕಟ್ಟಡ ತೆರವಿಗೆ ನಿರ್ಧರಿಸಲಾಯಿತು. ಆದರೆ ತೆರವು ಕಾರ್ಯ ಇದುವರೆಗೆ ನಡೆದಿಲ್ಲ. ಈ ಸ್ಥಳ ಕಡಬ ಸಮುದಾಯ ಆಸ್ಪತ್ರೆಗೆ ಸೇರಿದ ಜಾಗವಾಗಿರುವುದರಿಂದ ಕಟ್ಟಡ ತಕ್ಷಣ ತೆರವುಗೊಳಿಸಲು ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಸ್ತುತ ಇರುವ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣ ಆಗಬೇಕಿರುವುದರಿಂದ ಹೆಚ್ಚಿನ ಜಾಗ ಅಗತ್ಯವಿದೆ. ಈ ಜಾಗ ಆಸ್ಪತ್ರೆಗೆ ಬಿಟ್ಟು ಕೊಡುವ ಸಲುವಾಗಿ ಸಂಬಂದಪಟ್ಟವರು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಈಗಾಗಲೇ ಹಳೆಸ್ಟೇಷನ್ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಕಡಬ ತಾಲೂಕು ಪಂಚಾಯಿತಿ ಕಟ್ಟಡ ಸಮೀಪ ಹೊಸದಾಗಿ ಸುಸಜ್ಜಿತ ನಿರೀಕ್ಷಣ ಮಂದಿರ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿತ್ತು. ಮುಂದಿನ ಬೆಳವಣಿಗೆಯಲ್ಲಿ ತಾಲೂಕು ಪಂಚಾಯಿತಿ ಕಟ್ಟಡ ಆವರಣದಲ್ಲಿ ವಾಹನ ಪಾರ್ಕಿಂಗ್ ಅಗತ್ಯವಿರುವುದರಿಂದ ಆ ಜಮೀನನ್ನು ಕೈಬಿಡಲಾಯಿತು. ಇದೀಗ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ರುದ್ರಭೂಮಿ ಬಳಿ ನಿರೀಕ್ಷಣ ಮಂದಿರಕ್ಕಾಗಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಭಾಕರ ಖಜೂರೆ, ತಹಸೀಲ್ದಾರ ಕಡಬ ತಾಲೂಕು https://www.vijayavani.net/youth-commits-suicide-in-mangalore-lodge-after-being-cheated-by-female-cisf-officer https://www.vijayavani.net/mangalore-mr-and-miss-karavali-2025-contest-winners

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net