ಹದಗೆಟ್ಟ ‘ಸ್ಮಾರ್ಟ್’ ರಸ್ತೆ

New Road
Published on

ಹುಬ್ಬಳ್ಳಿ : ಸ್ಮಾರ್ಟ್​ಸಿಟಿ ಯೋಜನೆ ಅಡಿ ನಿರ್ವಿುಸಿದ ರಸ್ತೆಗಳೆಂದರೆ ಗುಣಮಟ್ಟದ್ದಾಗಿರುತ್ತವೆ, ನೋಡಲು ಸುಂದರವಾಗಿರುತ್ತವೆ, ಈ ರಸ್ತೆಯಲ್ಲಿನ ವಾಹಗಳ ಸಂಚಾರ ಸುಗಮವಾಗಿರುತ್ತವೆ ಎಂಬ ಕಲ್ಪನೆ ಸಹಜ.

ಆದರೆ, ಇಲ್ಲಿನ ಗೋಕುಲ ರಸ್ತೆಯ ಡಾಲರ್ಸ್ ಕಾಲನಿಯಲ್ಲಿ ಸ್ಮಾರ್ಟ್​ಸಿಟಿ ಯೋಜನೆ ಅಡಿ ನಿರ್ವಿುಸಿರುವ ರಸ್ತೆಗಳ ಇಂದಿನ ದುಸ್ಥಿತಿ ನೋಡಿದರೆ ಸಾಕು, ಕಾಮಗಾರಿಯ ಗುಣಮಟ್ಟ ಕಣ್ಣೆದುರು ಬರುತ್ತದೆ.

2021ರಲ್ಲಿ ಸ್ಮಾರ್ಟ್​ಸಿಟಿ ಯೋಜನೆ ಅಡಿ ಡಾಲರ್ಸ್ ಕಾಲನಿ, ಮಂಜುನಾಥ ನಗರ ಸೇರಿದಂತೆ ಸುತ್ತಲಿನ ಬಡಾವಣೆಗಳಲ್ಲಿ 4.20 ಕಿಮೀ ಉದ್ದದ ಡಾಂಬರ್ ರಸ್ತೆಗಳನ್ನು ನಿರ್ವಿುಸಲಾಗಿದೆ. ಇದಕ್ಕಾಗಿ 29 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಸಾಮಾನ್ಯವಾಗಿ ಸ್ಮಾರ್ಟ್​ಸಿಟಿ ಯೋಜನೆ ಅಡಿ ನಿರ್ವಿುಸಿದ ಕಾಮಗಾರಿಗಳು ಗುಣಮಟ್ಟದ್ದಾಗಿರುತ್ತವೆಯೆಂದು ಆರಂಭದಲ್ಲಿ ಈ ಬಡಾವಣೆಗಳ ಜನ ನಂಬಿದ್ದರು. ಇನ್ನೂ ನಮ್ಮ ಬಡಾವಣೆಗಳ ರಸ್ತೆಗಳು ‘ಸ್ಮಾರ್ಟ್’ ಆಗುತ್ತಿವೆ. ವಾಹನ ಸಂಚಾರ ಸುಗಮವಾಗುತ್ತದೆ. ರಸ್ತೆಗಳು ಕಂಗೊಳಿಸುತ್ತವೆ ಎಂದೆಲ್ಲ ಇಲ್ಲಿನ ಜನರು ಕಲ್ಪನೆ ಕಟ್ಟಿಕೊಂಡಿದ್ದರು.

ಆದರೆ, ಈ ಕಲ್ಪನೆಗಳೆಲ್ಲ ರಸ್ತೆ ನಿರ್ಮಾಣಗೊಂಡು ಕೇವಲ ನಾಲ್ಕು ವರ್ಷಗಳಲ್ಲಿ ಛಿದ್ರಗೊಂಡಿವೆ. ರಸ್ತೆ ಮಧ್ಯೆ, ಅಕ್ಕ-ಪಕ್ಕ ಎಲ್ಲೆಂದರಲ್ಲಿ ಡಾಂಬರ್ ಕಿತ್ತು ಹೋಗಿ, ಆಳಗಲದ ತಗ್ಗುಗಳು ಕಾಣಿಸಿಕೊಂಡಿವೆ. ಮಳೆಗಾಲದಲ್ಲಿ ಯಾವುದು ತಗ್ಗು, ಯಾವುದು ಉತ್ತಮ ರಸ್ತೆಯೆಂದು ಸರಿಯಾಗಿ ಗ್ರಹಿಸಲಾಗದೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು, ಗಾಯಗೊಂಡಿದ್ದಾರೆ.

ನಿಯಮದ ಪ್ರಕಾರ ರಸ್ತೆ ನಿರ್ವಿುಸಿದ ನಂತರ ಮುಂದಿನ ಐದು ವರ್ಷಗಳವರೆಗೆ ಅವುಗಳ ನಿರ್ವಹಣೆಯನ್ನೂ ಸ್ಮಾರ್ಟ್​ಸಿಟಿ ಯೋಜನೆ ಅಡಿಯೇ ಕೈಗೊಳ್ಳಬೇಕು. ಆದರೆ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಮೂಲಗಳ ಪ್ರಕಾರ, ರಸ್ತೆ ನಿರ್ಮಾಣಗೊಂಡು ಮರು ವರ್ಷವೇ ಸ್ಮಾರ್ಟ್​ಸಿಟಿ ಕಂಪನಿಯಿಂದ ಮಹಾನಗರ ಪಾಲಿಕೆಗೆ 2.75 ಕೋಟಿ ರೂ. ನೀಡಲಾಗಿದೆ. ಆ ಮೂಲಕ ಈ ರಸ್ತೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ.

ಆದರೆ, ಈ ರಸ್ತೆ ಹದಗೆಟ್ಟು ಹಲವಾರು ತಿಂಗಳುಗಳು ಕಳೆದರೂ ಇದುವರೆಗೆ ದುರಸ್ತಿಗೊಂಡಿಲ್ಲ. ಮಳೆಗಾಲಕ್ಕೂ ಮುಂಚೆ ಇಲ್ಲಿನ ಗಟಾರುಗಳನ್ನು ಸ್ವಚ್ಛಗೊಳಿಸಿದ್ದರೆ ಈ ರಸ್ತೆ ಇಷ್ಟೊಂದು ಹದಗೆಡುತ್ತಿರಲಿಲ್ಲ ಎಂಬ ಅಭಿಪ್ರಾಯ ಇಲ್ಲಿನ ನಾಗರಿಕರದ್ದು.

ಹದಗೆಟ್ಟಿರುವ ಇಲ್ಲಿನ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಇಲ್ಲಿನ ನಾಗರಿಕರ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net