ಶಿಥಿಲಾವಸ್ಥೆಯಲ್ಲಿ ಶಾಲೆ ಕೊಠಡಿಗಳು

3 vikram 10
Published on

ವಿಕ್ರಮ ನಾಡಿಗೇರ ಧಾರವಾಡ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿದೆ ಎಂಬ ಮಾತು ಸದಾ ಕೇಳುತ್ತಿದೆ. ಆದರೆ ಆ ಸಂಖ್ಯೆ ಹೆಚ್ಚಿಸುವಂತೆ ಸಕಲ ಸೌಲಭ್ಯ ನೀಡಬೇಕು ಎಂಬ ಆಸ್ಥೆ ಮಾತ್ರ ನಮ್ಮ ಜನಪ್ರತಿನಿಽಗಳಲ್ಲಿ ಕಾಣುತ್ತಿಲ್ಲ. ಇದಕ್ಕೆ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಶಿಥಿಲಾವಸ್ಥೆ ಕೊಠಡಿಗಳೇ ಸಾಕ್ಷಿ.
ಪ್ರತಿ ವರ್ಷ ಮಳೆಯಿಂದ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸಾಕಷ್ಟು ಕೊಠಡಿಗಳು ಹಾಳಾಗುತ್ತಿವೆ. ಅವುಗಳ ದುರಸ್ತಿಗೆ ತಕ್ಷಣದಲ್ಲಿ ಕ್ರಮವಾಗದ ಕಾರಣ ಅವು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಶಿಥಿಲಾವಸ್ಥೆಗೆ ತಲುಪುತ್ತಿವೆ. ಕೆಲ ಕೊಠಡಿಗಳು ದುರಸ್ತಿಗೆ ಸಹ ಯೋಗ್ಯವಾಗಿರದೆ ನೆಲಸಮ ಮಾಡುವ ಹಂತಕ್ಕೆ ತಲುಪಿವೆ. ಇನ್ನು ಕೆಲ ಕಡೆಗಳಲ್ಲಿ ಮಕ್ಕಳು ಹಾಳಾದ ಕಟ್ಟಡದಲ್ಲೇ ಪಾಠ ಕೇಳುವಂತಹ ಸ್ಥಿತಿ ಇದೆ.
ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿ ೮೪೭ ಶಾಲೆಗಳಿವೆ. ಈ ಶಾಲೆಗಳಲ್ಲಿ ಒಟ್ಟು ೬೬೩೫ ಕೊಠಡಿಗಳ ಪೈಕಿ ೧೩೫೨ ಕೊಠಡಿಗಳು ದುರಸ್ತಿ ಆಗಬೇಕಿದ್ದರೆ, ೩೩೮ ಕೊಠಡಿಗಳನ್ನು ನೆಲಸಮಗೊಳಿಸಬೇಕಿದೆ. ೨೦೨೩-೨೪ನೇ ಸಾಲಿನಲ್ಲಿ ೮೬ ಶಾಲೆಗಳ ೨೮೬ ಕೊಠಡಿಗಳ ದುರಸ್ತಿಗೆ ೩.೩ ಕೋಟಿ ರೂ. ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಬಿಡುಗಡೆಯಾದ ಮೊತ್ತ ೮೩ ಲಕ್ಷ ರೂ. ಮಾತ್ರ. ಈಗ ಮತ್ತೆ ಶಿಥಿಲಾವಸ್ಥೆ ಕೊಠಡಿಗಳ ಸಂಖ್ಯೆ ಹೆಚ್ಚಾದ ಕಾರಣ ಮತ್ತೆ ಸರ್ಕಾರಕ್ಕೆ ವರದಿ ಸಲ್ಲಿಸಿ ಅನುದಾನಕ್ಕೆ ಕೋರಲಾಗಿದೆ.
ಶಾಲೆ ಆರಂಭದಲ್ಲಿ ಮಾತ್ರ ಶಿಕ್ಷಣ ಇಲಾಖೆ ಅಽಕಾರಿಗಳು ಹಾಗೂ ಜನಪ್ರತಿನಿಽಗಳು ಶಾಲೆ ಕೊಠಡಿಗಳ ಸ್ಥಿತಿ ಕುರಿತು ನೆನಪಾಗುತ್ತದೆ. ಇದೇ ಕಾರಣಕ್ಕೆ ಕೊಠಡಿಗಳು ದುರಸ್ತಿ ಕಾಣುತ್ತಿಲ್ಲ. ಒಂದೊಮ್ಮೆ ಜಿಲ್ಲೆ ಎಲ್ಲ ಕೊಠಡಿಗಳ ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ಶಿಥಿಲಾವಸ್ಥೆ ಕೊಠಡಿಗಳ ಸಂಖ್ಯೆ ಹೆಚ್ಚಳವಾಗುವುದು ನಿಶ್ಚಿತ.
ಸಹಾಯವಾದ ವಿವೇಕ, ಸಿಎಸ್‌ಆರ್ ಫಂಡ್: ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆ ಅಡಿ ಒಟ್ಟು ೨೯೫ ಕೊಠಡಿಗಳನ್ನು ನಿರ್ಮಿಸಲು ಆದೇಶಿಸಲಾಗಿದೆ. ಈ ಪೈಕಿ ೧೫೭ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣವಾಗಿದ್ದರೆ, ೧೩೮ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇದಲ್ಲದೆ ಕೋಲ್ ಇಂಡಿಯಾ ಕಂಪನಿ ಸಿಎಸ್‌ಆರ್ ಫಂಡ್ ಅಡಿ ೧೪೧ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಕೊಂಚ ಮಟ್ಟಿಗೆ ಕೊಠಡಿಗಳ ಕೊರತೆ ಎದುರಾಗದಂತಾಗಿದೆ.

ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿಗಳು ನಡೆದಿವೆ. ಚುನಾವಣೆ ಘೋಷಣೆಯಿಂದ ಅಲ್ಪ ವಿಳಂಬವಾಗಿದೆ. ಇದೀಗ ಮತ್ತೆ ದುರಸ್ತಿಗಳು ಆರಂಭವಾಗಲಿವೆ.*ಎಸ್.ಎಸ್. ಕಳೆದಿಮಠ, ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net