ಜಿಲ್ಲೆಯಲ್ಲಿ ಶಿಥಿಲ ಶಾಲಾ ಕಟ್ಟಡ ತೆರವು ಶೀಘ್ರ

building
ಶಿಥಿಲ ಶಾಲಾ ಕಟ್ಟಡ
Published on

ತಕ್ಷಣ ವರದಿ ನೀಡುವಂತೆ ಬಿಇಒಗಳಿಗೆ ಡಿಡಿಪಿಐ ಸೂಚನೆ

ಮಕ್ಕಳನ್ನು ಕೂರಿಸದಂತೆ ತಾಕೀತು


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಸರ್ಕಾರಿ ಶಾಲೆಗಳ ಪುನಾರಂಭಕ್ಕೆ ಅದ್ದೂರಿ ಸಿದ್ದತೆ ಮಾಡಿಕೊಂಡಿರುವ ನಡುವೆಯೇ ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲಾ ಕಟ್ಟಡಗಳ ತೆರವಿಗೆ ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿನ ಹಲವು ಪುರಾತನ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅವುಗಳ ಪರಿಶೀಲನೆ ನಡೆಸಿ ವಸ್ತುಸ್ಥಿತಿಯ ವರದಿ ಸಲ್ಲಿಸುವಂತೆ ಅಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಪಂಚಾಯಿತಿ ಅಧಿಕಾರಿಗಳ ಸಹಯೋಗದಲ್ಲಿ ಶಾಲೆಗಳ ತಪಾಸಣೆ ಆರಂಭಿಸಿದ್ದಾರೆ. ಕಳೆದೊಂದು ವರ್ಷದಿಂದ ಕೆಲವು ಶಾಲೆಗಳ ವಸ್ತುಸ್ಥಿತಿಯ ರಿಪೋರ್ಟ್ ಕಾರ್ಡ್ ತಲುಪಿಸಿದ್ದು, ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಅಂಥ ಶಾಲೆಗಳನ್ನು ಶೀಘದಲ್ಲೇ ತೆರವುಗೊಳಿಸಿ ಅಗತ್ಯತೆ ಆಧಾರದ ಮೇಲೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಅವಲೋಕಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಕ್ರಮಕ್ಕೆ ಸೂಚನೆ: ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸುಮಾರು 40-50 ವರ್ಷದಷ್ಟು ಹಳೆಯದಾದ ಕಟ್ಟಡಗಳಿದ್ದರೆ ಅವುಗಳನ್ನು ಕೂಡಲೇ ಪತ್ತೆ ಹಚ್ಚಬೇಕು, ಪಂಚಾಯಿತಿ, ಎಸ್‌ಡಿಎಂಸಿ ಹಾಗೂ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಬೇಕು, ಕಟ್ಟಡದ ಪೊಟೋ, ವಿಡಿಯೋ ಮತ್ತಿತರ ಸಮರ್ಪಕ ದಾಖಲೆ ಸಿದ್ದ ಪಡಿಸಿ ವರದಿ ನೀಡಬೇಕು. ತಕ್ಷಣಕ್ಕೆ ಅಂಥ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಕ್ಕಳನ್ನು ಕೂರಿಸಬೇಡಿ: ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ಗುರುತಿಸುವುದರ ಜತೆಗೆ ಅಂಥ ಶಾಲಾ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಥ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಬಾರದು, ಅಂಥ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತುರ್ತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಮಗ್ರ ವರದಿ ಕೊಡಿ: ಇಷ್ಟು ವರ್ಷ ಅಲ್ಲಲ್ಲಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಒಟ್ಟಾಗಿ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಇಂಥ ಕಟ್ಟಡಗಳಿಗೆ ಎಂಬುದನ್ನು ಗುರುತಿಸಿ ತಕ್ಷಣ ವರದಿ ನೀಡುವಂತೆ ಇಲಾಖೆ ತಿಳಿಸಿದೆ. ಸಮಗ್ರ ವರದಿಯನ್ನು ಸರ್ಕಾರಕ್ಕೆ ತಲುಪಿಸಿ ತಕ್ಷಣ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆ ರೂಪುರೇಷೆ ಸಿದ್ದಪಡಿಸಿದೆ.
ಹಲವು ಹಂತಗಳ ಪರಿಶೀಲನೆ: ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ತೆರವಿಗೆ ಹಲವು ಹಂತದ ಪರಿಶೀಲನೆ ನಡೆಯಲಿದೆ. ಎಸ್‌ಡಿಎಂಸಿಯಿಂದ ಅನುಮೋದನೆಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಡೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ತಲುಪಲಿದೆ. ಅಲ್ಲಿಂದ ಜಿಲ್ಲಾ ಪಂಚಾಯಿತಿ ಸಿಇಒ ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತಾರೆ. ಇದಕ್ಕೂ ಮೊದಲು ತಾಂತ್ರಿಕ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿ ಹಸಿರು ನಿಶಾನೆ ತೋರಿಸಬೇಕು, ಇವೆಲ್ಲ ಪ್ರಕ್ರಿಯೆಗಳ ಮೂಲಕ ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಸ್ತಿಗೆ ಕ್ರಮ: ಅಪಾಯಕ್ಕೆ ಆಹ್ವಾನ ನೀಡುತ್ತಿರುವಂಥ ಶಿಥಿಲಾವಸ್ಥೆ ತಲುಪಿರುವ ಹಳೇಯ ಶಾಲಾ ಕಟ್ಟಡಗಳನ್ನು ತೆರವುಗೊಳಿಸುವ ಜತೆಗೆ ಮೇಲ್ಚಾವಣಿಯಿಂದ ಮಳೆ ನೀರು ಸೋರುತ್ತಿರುವುದು, ಕಿಟಕಿ ಗಾಜು ಒಡೆದಿರುವುದು, ಬಾಗಿಲು ಸರಿಯಿಲ್ಲದಿರುವುದು, ಗೋಡೆಗಳು ಬಿರುಕುಬಿಟ್ಟಿರುವುದು, ಮಳೆಗಾಲದಲ್ಲಿ ನೀರು ಒಳನುಗ್ಗುವುದು, ಶಾಲಾ ಆವರಣದಲ್ಲಿ ನೀರು ನಿಲ್ಲುವುದು ಸೇರಿ ಇನ್ನಿತರ ಸಮಸ್ಯೆಗಳು ಕಂಡುಬಂದರೆ ತಕ್ಷಣ ಅವುಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಇಲಾಖೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿನ ಸಣ್ಣಪುಟ್ಟ ದುರಸ್ತಿ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಒತ್ತು ನೀಡಿದೆ.

ಶಿಥಿಲಾವಸ್ಥೆ ತಲುಪಿರುವ ಹಳೇಯದಾದ ಸರ್ಕಾರಿ ಶಾಲಾ ಕಟ್ಟಡಗಳ ಬಗ್ಗೆ ವರದಿ ನೀಡುವಂತೆ ಈಗಾಗಲೇ ನಾಲ್ಕೂ ತಾಲೂಕುಗಳ ಬಿಇಒಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾಲ್ಕೂ ತಾಲೂಕುಗಳಲ್ಲಿ ಅಯಾ ಶಾಲಾ ಮುಖ್ಯಶಿಕ್ಷಕರನ್ನೊಳಗೊಂಡಂತೆ ಸಭೆಗಳನ್ನು ನಡೆಸಲಾಗಿದೆ. ಈ ವಿಷಯದಲ್ಲಿ ಹಲವು ಹಂತದ ಪ್ರಕ್ರಿಯೆ ನಡೆಯಲಿದೆ. ಹಳೇಯದಾದ ಶಿಥಿಲ ಕಟ್ಟಡಗಳಲ್ಲಿ ತರಗತಿ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಂಥ ಶಾಲಾ ಮಕ್ಕಳಿಗೆ ಪರ್ಯಾಯ ಜಾಗ ಕಲ್ಪಿಸಲು ತಿಳಿಸಲಾಗಿದೆ.
ಕೃಷ್ಣಮೂರ್ತಿ, ಡಿಡಿಪಿಐ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net