ಶಿಥಿಲಗೊಂಡ ಸೇತುವೆಯಿಂದ ನೀರು ಸೋರಿಕೆ

11 kmp 01
ಕಂಪ್ಲಿ ಕೋಟೆಯ ತುಂಗಭದ್ರಾ ನದಿ ಅಪ್ರೋಚ್ ಕಟ್ಟಡದಿಂದ ನೀರು ಹರಿದು ನದಿಗೆ ಸೇರುತ್ತಿರುವುದು.
Published on

ಕಂಪ್ಲಿ: ಇಲ್ಲಿನ ಕೋಟೆಯ ತುಂಗಭದ್ರಾ ನದಿ ಸೇತುವೆೆ ಸಂಪರ್ಕಿಸುವ ಬ್ರಿಡ್ಜ್ ಅಪ್ರೋಚ್(ಸೇತುವೆ ಪ್ರವೇಶ) ಗೋಡೆಯ ಸಂದಿನಿಂದ ಕಳೆದ ಒಂದು ತಿಂಗಳಿನಿಂದಲೂ ನೀರು ಹರಿದು ಬರುತ್ತಿದೆ. ರಸ್ತೆ ಪ್ರವೇಶದ ಕಟ್ಟಡ ಆರ್ದ್ರತೆಯಿಂದ ಕೂಡಿದ್ದು ಬಸಿ ನೀರು ಹರಿದು ನದಿಗೆ ಸೇರುತ್ತಿದೆ. ಶಿಥಿಲಗೊಂಡ ಸೇತುವೆಗೆ ಇದೊಂದು ಹೊಸ ತೊಂದರೆಯಾಗಿ ಪರಿಣಮಿಸಿದೆ. ಕಲ್ಯಾಣ ಕರ್ನಾಟಕದ ಭಾಗಗಳಿಗೆ ಸಂಪರ್ಕಿಸುವ ಶಿಥಿಲಗೊಂಡ ಸೇತುವೆಗೆ ತೊಂದರೆಯಾದಲ್ಲಿ ಸುಮಾರು 30ಕಿ.ಮೀ. ಸುತ್ತುಬಳಸಿ ಬುಕ್ಕಸಾಗರದ ಕಡೇಬಾಗಿಲು ಸೇತುವೆ ಮೂಲಕ ಸಂಚರಿಸಬೇಕಾಗುತ್ತದೆ. ತುಂಗಭದ್ರಾ ನದಿ ಸೇತುವೆ ಆರು ದಶಕಗಳಷ್ಟು ಹಳೆಯದಾಗಿದ್ದು, ಸೇತುವೆ ಮೇಲೆ ವಾಹನಗಳು ಸಂಚರಿಸಿದಾಗ ಪಾದಚಾರಿಗಳಿಗೆ ಸೇತುವೆ ಕಂಪಿಸಿದ ಅನುಭವವಾಗುತ್ತದೆ. ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಂದಾಗಲೆಲ್ಲ ಸೇತುವೆ ನೀರಲ್ಲಿ ಮುಳುಗಿ ರಕ್ಷಣಾ ಕಂಬಿಗಳು, ಸೇತುವೆ ಮೇಲ್ಪದರ, ಜಾಯಿಂಟ್ಸ್‌ಗೆ ಧಕ್ಕೆಯಾಗುತ್ತದೆ. ಪುನಃ ತಾತ್ಕಾಲಿಕ ದುರಸ್ತಿಗೊಳಿಸಿ ಸಂಚಾರಕ್ಕೆ ಸಿದ್ಧಪಡಿಸಲಾಗುತ್ತದೆ. ಅಧಿಕ ಬಾರದ ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿವೆ. ಸೇತುವೆ ಶಿಥಿಲಗೊಂಡಿದ್ದರಿಂದ ಯಾವುದೇ ಸಂದರ್ಭದಲ್ಲಿ ಅಪಾಯ ಉಂಟಾಗುವ ಸಾಧ್ಯತೆಗಳ ಸಂಭವನೀಯತೆಯಿದ್ದು, ಹೊಸ ಸೇತುವೆ ನಿರ್ಮಿಸುವಂತೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಪಟ್ಟಣದ ನಿವಾಸಿಗಳು ಬೇಡಿಕೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಿಎಂ ಎಸ್.ಆರ್.ಬೊಮ್ಮಾಯಿ ಅವಧಿಯಲ್ಲಿ ಕಂಪ್ಲಿ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ಸುದ್ದಿ ಹರಡಿತಾದರೂ ಈತನಕ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿಲ್ಲ. ಶಾಸಕರು, ಪಟ್ಟಣದ ಪ್ರಗತಿಪರ ಸಂಘಟನೆಗಳ ಒತ್ತಾಯಕ್ಕೆ ಮಣಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ 2025ರ ಜೂ.16ರಂದು ಪಟ್ಟಣಕ್ಕೆ ಆಗಮಿಸಿ ಸೇತುವೆ ವೀಕ್ಷಿಸಿ ಹೊಸ ಸೇತುವೆ ನಿರ್ಮಾಣ ಕುರಿತು ಭರವಸೆ ನೀಡಿದ್ದರು. ಇದೀಗ ಅಪ್ರೋಚ್ ಕಟ್ಟಡದಿಂದ ಬಸಿ ನೀರು ಹರಿದು ಬರುತ್ತಿದ್ದು ಕೂಡಲೇ ದುರಸ್ತಿಗೊಳಿಸುವ ಅಗತ್ಯತೆಯಿದೆ.

ಹೊಸ ಸೇತುವೆ ನಿರ್ಮಾಣವಾಗುವತನಕ ಹಳೇ ಸೇತುವೆ ರಕ್ಷಣೆ ಅಗತ್ಯವಿದೆ. ಸೇತುವೆ ರಕ್ಷಣೆಗೆ ತಕ್ಕ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಹೊಸ ಸೇತುವೆ ನಿರ್ಮಾಣಕ್ಕೆ ಸಿಎಂ ಜತೆ ಚರ್ಚಿಸಿ ಗಮನಸೆಳೆಯುತ್ತೇನೆ. ಎ.ಸಿ.ದಾನಪ್ಪ ದಿಶಾ ರಾಜ್ಯ ಸಮಿತಿ ಸದಸ್ಯ, ಕಂಪ್ಲಿ ವಿಷಯ ತಿಳಿದ ಕೂಡಲೇ ಸೆಕ್ಷನ್ ಆಫೀಸರ್ ಅವರನ್ನು ವೀಕ್ಷಣೆಗೆ ಕಳುಹಿಸಿದ್ದು ಪರಿಶೀಲಿಸುತ್ತಿದ್ದಾರೆ. ಬಹುಶಃ ಪೈಪು ಒಡೆದು ನೀರು ಬರುತ್ತಿರಬಹುದು. ನೀರು ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಮಾಡಿ ನೀರು ಬಸಿಯದಂತೆ ಸೇತುವೆಗೆ ರಕ್ಷಣೆ ಒದಗಿಸಲಾಗುವುದು. ಜೆ.ವಿಶ್ವನಾಥ ಪಿಡಬ್ಲ್ಯುಡಿ ಎಇಇ ಗಂಗಾವತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net