ಅಭಿವೃದ್ಧಿ ಕಾಣದ ಕೆಪಿಎಸ್ ಶಾಲೆ

JLRph 1 May 30 Focus Story
Published on

ಲೋಕೇಶ್.ಎಂ ಐಹೊಳೆ

ಕಾಂಪೌಡ್ ಬದಲು ಸುತ್ತ ಬೇಲಿ, ಬಿರುಕು ಬಿಟ್ಟ ಗೋಡೆ, ಬಿರುಕು ಬಿಟ್ಟಿರುವ ಕೊಠಡಿಗಳು, ಒಡೆದಿರುವ ಹೆಂಚುಗಳು, ಸೋರುವ ಮಾಳಿಗೆ ಕುಳಿತುಕೊಳ್ಳಲು ಡೆಸ್ಕ್ ಇಲ್ಲ, ಸುಣ್ಣ, ಬಣ್ಣ ಕಾಣದೆ ಬಿರುಕು ಬಿಟ್ಟ ಗೋಡೆಗಳು, ಡಸ್ಕ್​ಗಳೇ ಇಲ್ಲದ ಕೊಠಡಿಗಳು, ಒಡೆದಿರುವ ಹೆಂಚುಗಳು, ಬಿಸಿಯೂಟಕ್ಕೆ ಕೊಠಡಿಗಳ ಕೊರತೆ, ಶುದ್ದ ಕುಡಿವ ನೀರಿಗೆ ಬರ !

ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಗಳಿವು.ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡಿದ ಅಕ್ಷರ ದೇಗುಲ ಈಗ ಶಿಥಿಲವಾಗಿದೆ.

ಶಿಕ್ಷಕರು, ವಿದ್ಯಾರ್ಥಿಗಳು ಆತಂಕದಲ್ಲಿ ದಿನ ದೂಡುವಂತಾಗಿದೆ. 1-7ನೇ ತರಗತಿವರೆಗೆ 180 ಮಕ್ಕಳ ಹಾಜರಾತಿ ಹೊಂದಿದೆ. ಮುಖ್ಯಶಿಕ್ಷಕ -1, ಸಹ ಶಿಕ್ಷಕ-1, ದೈಹಿಕ ಶಿಕ್ಷಣ ಶಿಕ್ಷಕ-1 ಹುದ್ದೆ ಖಾಲಿ ಇದ್ದು, 5 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ತೀವ್ರ ಪೈಪೋಟಿ ನಡುವೆಯೂ ನೂರಾರು ವಿದ್ಯಾರ್ಥಿಗಳ ಹಾಜರಾತಿ ಇದೆ. ಗಣಿತ, ವಿಜ್ಞಾನ, ಇಂಗ್ಲೀಷ್ ಸೇರಿ ಯಾವುದೇ ವಿಷಯದಲ್ಲೂ ವಿದ್ಯಾರ್ಥಿಗಳು ಹಿಂದೆ ಬಿದ್ದಿಲ್ಲ. ನುರಿತ ಶಿಕ್ಷಕರಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಪ್ರಶಸ್ತಿಗಳನ್ನು ಮುಡಿಗೇರೆಸಿಕೊಂಡಿದ್ದಾರೆ.

ಇಂತಹ ಶಾಲೆಗಳನ್ನು ಗುರುತಿಸಿ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಗ್ರಾಪಂ ಕೇಂದ್ರವಾಗಿರುವ ಕಲ್ಲೇದೇವರಪುರದಲ್ಲಿ ಶಾಲೆ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಅನುದಾನ ಕೊರತೆಯಿಂದ ಕೊಠಡಿಗಳು ದುರಸ್ತಿ ಇಲ್ಲದೆ ಪಾಳು ಬಿದ್ದಿವೆ. ಕೆಲ ಕೊಠಡಿಗಳಲ್ಲಿ ಕಾಲಿಡಲು ಭಯ ಎನಿಸುತ್ತ ದೆ.

ಕಾಂಪೌಂಡ್ ಬದಲು ಬೇಲಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಶಾಲೆಯ ಒಂದು ಕಡೆ ಕಾಂಪೌಂಡ್ ಇಲ್ಲ. ಹಾಗಾಗಿ ಕುರಿ, ದನಗಳು ಒಳಗೆ ನುಗ್ಗುವುದು ಸಾಮಾನ್ಯವಾಗಿತ್ತು. ಆಟವಾಡುವ ಮಕ್ಕಳಿಗೆ ತೊಂದರೆಯಾಗದಿರಲಿ ಎಂದು ಗ್ರಾಮಸ್ಥರು ಶಾಲೆ ಸುತ್ತ ಬೇಲಿ ಹಾಕಿಸಿದ್ದಾರೆ. ಕಾಂಪೌಂಡ್ ನಿರ್ವಣಕ್ಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಖಾಸಗಿ ಶಾಲೆಗಳತ್ತ ಹೆಜ್ಜೆ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಈ ಶಾಲೆ ಹಾಜರಾತಿಯಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿವರ್ಷ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಇರುತ್ತಿತ್ತು. ಆದರೆ ಶಾಲೆ ದುಸ್ಥಿತಿ ಕಾರಣ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಗಳಗೆ ಸೇರ್ಪಡೆ ಮಾಡುತ್ತಿದ್ದಾರೆ.

ಶಾಲೆ ತುಂಬ ಹಳೆಯದಾಗಿದೆ. 4 ಕೊಠಡಿಗಳು ಸಾಧಾರಣವಾಗಿವೆ. 3 ಶಿಥಿಲಗೊಂಡಿವೆ, 3 ಕೊಠಡಿಗಳನ್ನು ತೆರವು ಮಾಡಲಾಗಿದೆ. ಇದರಿಂದ ಮಕ್ಕಳಿಗೆ ತರಗತಿ ನಡೆಸಲು ತೊಂದರೆಯಾಗುತ್ತಿದೆ. ಅಲ್ಲದೇ 1 ಮತ್ತು 2ನೇ ತರಗತಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಶಾಲೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೊಠಡಿ ದುರಸ್ತಿ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಯಾವುದೇ ಕಾಮಗಾರಿ ಮಾಡಿಲ್ಲ. | ಸತ್ಯನಾರಾಯಣ ರೆಡ್ಡಿ, ಮುಖ್ಯಶಿಕ್ಷಕ (ಪ್ರಭಾರ). ಸರ್ಕಾರ ವಿವಿಧ ಯೋಜನೆಗಳಿಗಾಗಿ ಕೋಟ್ಯಂತರ ರೂ. ಹಣ ವ್ಯಯ ಮಾಡುವ ಬದಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಏಕೆ ಒತ್ತು ನೀಡಬಾರದು. ಪ್ರತಿವರ್ಷ ಒಂದೊಂದು ಶಾಲೆಯನ್ನು ಮಾದರಿಯಾಗಿ ಮಾಡಬಹುದು, ಆದರೆ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಮಟ್ಟಕ್ಕೆ ತಲುಪಿರುವುದು ಖಂಡನೀಯ. | ಡಿ. ತಿಪ್ಪೇಸ್ವಾಮಿ, ಗ್ರಾಮ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net