ಮೈಸೂರಿನ ಅಂಗನವಾಡಿಗಳ ಶೋಚನೀಯ ಸ್ಥಿತಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಕಳವಳ

mys
Published on

ಮೈಸೂರು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ನಗರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯದ ರಾಜ್ಯ ಸಮಿತಿ ಅಧ್ಯಕ್ಷರಾದ ವಿಶ್ರಾಂತ ನ್ಯಾಯಾಮೂರ್ತಿ ನಿರ್ದೇಶನದ ಪ್ರಕಾರ ಈ ಪರಿಶೀಲನೆ ಕಾರ್ಯ ನಡೆಯಿತು. ಭೇಟಿ ಸಂದರ್ಭ ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವುದನ್ನು ಗಮನಿಸಲಾಯಿತು.

ನಗರದಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಸಮುದಾಯ ಭವನ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಶುದ್ಧ ಗಾಳಿ, ಬೆಳಕು, ಕುಡಿಯುವ ನೀರಿನ ಕೊರತೆ ಇದೆ. ಅಲ್ಲದೆ ಕಟ್ಟಡಗಳು ಶಿಥಿಲಗೊಂಡಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಇನ್ನು ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಹೆಗ್ಗಣಗಳು ಬಿಲ ತೋಡಿ ಕಟ್ಟಡದ ನೆಲಹಾಸು ಹಾಳಾಗಿದ್ದು, ಇದರಿಂದ ಅಹಾರ ಸಂರಕ್ಷಣೆಗೆ ತೊಡಕುಂಟಾಗಿರುವುದು ಕಂಡು ಬಂತು. ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ತಯಾರಿಸುವ ಆಹಾರದಲ್ಲಿ ಪೋಷಕಾಂಶದ ಕೊರತೆ, ಮಕ್ಕಳಿಗೆ ತಯಾರಿಸುವ ಲಡ್ಡು ಹಾಗೂ ಸಾಂಬಾರು ಮಾಡಲು ಉಪಯೋಗಿಸುವ ಬೇಳೆ, ಕಾಳುಗಳು ಅವಧಿ ಮುಕ್ತಾಯವಾಗಿದ್ದ ಆಹಾರ ಪದಾರ್ಥಗಳನ್ನು ಇರುವುದನ್ನು ಕಂಡು ನ್ಯಾಯಾಧೀಶರು ಕಳವಳವನ್ನು ವ್ಯಕ್ತಪಡಿಸಿದ್ದರು. ಸದರಿ ಆಹಾರ ಪದಾರ್ಥಗಳನ್ನು ತಕ್ಷಣ ವಾಪಸ್ಸು ಕಳುಹಿಸುವಂತೆ ಹಾಗೂ ಉತ್ತಮ ಅಹಾರ ಪದಾರ್ಥಗಳು ಪಡೆಯುವಂತೆ ನಿರ್ದೇಶಿಸಿದರು.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ಮೇಲ್ವಿಚಾರಕರಿಗೆ ಅಂಗನವಾಡಿ ಕೇಂದ್ರಗಳನ್ನು ಹೇಗೆ ನಿಭಾಹಿಸಬೇಕು ಮತ್ತು ಸರ್ಕಾರದ ಆಶಾಯ, ಉದ್ದೇಶಗಳನ್ನು ಮನವರಿಕೆ ಮಾಡಿಕೊಟ್ಟು, ಮೂಲ ಸೌಕರ್ಯಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರ, ಶೂಶ್ರೂಷಕರ, ಪೊಲೀಸ್ ಠಾಣೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಅಧಿಕಾರಿಗಳ, ಮೇಲ್ವಿಚಾರಕರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net