ಸರ್ಕಾರಿ ಶಾಲೆಯ ಕಟ್ಟಡಗಳ ಕಳಪೆ ಕಾಮಗಾರಿ

14myk2
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಗ್ರಾಮೀಣ ಪ್ರದೇಶದಲ್ಲಿ ರೈತರ, ಕೂಲಿ ಕಾರ್ವಿುಕರ, ಬಡವರ ಜ್ಞಾನ ದೇಗುಲವಾದ ಸರ್ಕಾರಿ ಶಾಲೆಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ, ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಶಿಥಿಲಾವಸ್ಥೆ ತಲುಪಿವೆ.

ಹೌದು, ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಗಳು, ಅದರಲ್ಲೂ ಕೆಲವು ವರ್ಷಗಳ ಹಿಂದೆ ನಿರ್ವಿುಸಿದ್ದ ಕೊಠಡಿಗಳ ಮೇಲ್ಛಾವಣಿಯಲ್ಲಿ ನೀರು ಸುರಿಯುತ್ತಿದೆ. ಗೋಡೆಗಳು ಹಾಗೂ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ.

ಈ ಪಾಠಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 70 ವಿದ್ಯಾರ್ಥಿಗಳಿದ್ದು, ಮೂವರು ಶಿಕ್ಷಕಿಯರಿದ್ದಾರೆ. 2 ಎಕರೆಗಿಂತ ಹೆಚ್ಚು ವಿಶಾಲ ಮೈದಾನವನ್ನು ಹೊಂದಿದೆ. ಶಾಲಾ ಅಂಗಳದಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗುತ್ತಿವೆ. ನೀರು ನಿಲ್ಲದಂತೆ ವ್ಯವಸ್ಥೆ ಮಾಡಲು ಗ್ರಾಮ ಪಂಚಾಯಿತಿ ಕೂಡಲೇ ಗಮನ ಹರಿಸಬೇಕಿದೆ.

2020- 21ನೇ ಸಾಲಿನಲ್ಲಿ ನಿರ್ಮಾಣ ಮಾಡಿದ ಕೊಠಡಿಯ ಮೇಲ್ಛಾವಣಿ, ಗೋಡೆಗಳು ಹಾಳಾಗಿವೆ. ಶಾಲೆ ಕಚೇರಿಯ ಕೊಠಡಿ ಸಹ ಮಳೆ ನೀರಿನಿಂದ ಜಲಾವೃತಗೊಂಡು ಕುಸಿಯುವ ಸ್ಥಿತಿಯಲ್ಲಿದೆ. ಒಂದನೇ ತರಗತಿ ನಲಿ ಕಲಿ ಕೊಠಡಿ ಕೂಡ ನೀರು ತುಂಬಿಕೊಂಡು ಹಾಳಾಗುತ್ತಿದೆ. ಶಾಲೆ ಮುಂದಿನ ಮೆಟ್ಟಿಲುಗಳು ಸರಿಯಾಗಿಲ್ಲ. ಕೊಠಡಿಯೊಳಗೆ ಕುಳಿತು ಕೆಲಸ ಮಾಡಲು ಮತ್ತು ಮಕ್ಕಳಿಗೆ ಪಾಠ ಹೇಳಿಕೊಡಲು ಭಯವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ವಿಶಾಲವಾದ ಶಾಲಾ ಅಂಗಳದಲ್ಲಿ ನೀರು ನಿಲ್ಲದಂತೆ ಗ್ರಾಮ ಪಂಚಾಯಿತಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮಳೆ ನೀರು ನಿಂತು ಕಟ್ಟಡಗಳು ಹಾಳಾಗದಂತೆ ಮತ್ತು ಅವುಗಳಿಗೆ ಬಣ್ಣ ಹಚ್ಚಿಸುವ ಕಡೆ ಪಾಲಕರ ಸಮಿತಿ, ಗ್ರಾಮಸ್ಥರು, ಗ್ರಾಪಂ ಜನಪ್ರತಿನಿಧಿ ಹಾಗೂ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. | ಅಣಬೇರು ಕುಮಾರಸ್ವಾಮಿ, ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಮುಖಂಡ. ಶಾಲಾ ಅಂಗಳದಲ್ಲಿ ನೀರು ನಿಲ್ಲದಂತೆ ಮಣ್ಣು ಹಾಕಿಸಲು ಗ್ರಾಪಂ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಮನವಿ ಮಾಡಲಾಗಿದೆ. ಕೂಡಲೇ ಕ್ರಮ ಕೈಗೊಂಡು ಮಕ್ಕಳಿಗೆ ಸೊಳ್ಳೆ ಕಾಟದಿಂದ ಮುಕ್ತಿ ನೀಡಬೇಕು. | ಅನಿತಾ, ಶಿಕ್ಷಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net