

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಹೇರಿಕುದ್ರು ಸಮೀಪ ವಾರಾಹಿ ನದಿಗೆ ನಿರ್ಮಿಸಲಾದ ಹಳೆಯ ಸೇತುವೆಯ ತಡೆಗೋಡೆ, ಫುಟ್‌ಪಾತ್ ಶಿಥಿಲಗೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ. ಬಲಗಡೆಯ ಫುಟ್‌ಪಾತ್‌ನಲ್ಲಂತೂ ನಡೆದುಕೊಂಡು ಹೋಗಲು ಸಾಧ್ಯವಿಲ್ಲದಷ್ಟು ಹಾನಿಯಾಗಿದೆ.
ಬೈಂದೂರು - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಳೇ ಸೇತುವೆ ಇದಾಗಿದೆ. ಈ ಸೇತುವೆಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ತಡೆಗೋಡೆಗೆ ಹಾನಿಯಾಗಿದ್ದರೆ, ಇನ್ನೂ ಕೆಲವೆಡೆಗಳಲ್ಲಿ ಸೇತುವೆಯ ಗಾರ್ಡ್ ಕಿತ್ತು ಹೋಗಿದೆ. ಇನ್ನು ಸೇತುವೆಯ ಫುಟ್‌ಪಾತ್ ಮೂರು ಕಡೆ ಕುಸಿದಿದ್ದು, ಅಪಾಯಕಾರಿಯಾಗಿದೆ.
ಮುಂಬೈ, ಗೋವಾ ಮೊದಲಾದ ರಾಜ್ಯಗಳ ಸಂಪರ್ಕಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿವರೆಗೂ ವಾಹನಗಳು ಸಂಚರಿಸುತ್ತಿರುತ್ತವೆ. 1970ರಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ಸೇತುವೆಯ ತಡೆಗೋಡೆ ಹಾಗೂ ಫುಟ್‌ಪಾತ್‌ಗೆ ಹಾನಿಯಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಸಂಸ್ಥೆಯವರು ಎಚ್ಚೆತ್ತುಕೊಂಡು, ಶೀಘ್ರ ದುರಸ್ತಿ ಕಾರ್ಯ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಳೆ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಕುಂದಾಪುರದಿಂದ ಬೈಂದೂರು ಕಡೆಗೆ ಹಳೇ ಸೇತುವೆಯಲ್ಲಿಯೇ ಸಂಚರಿಸಲು ಅವಕಾಶ ಮಾಡಿದ್ದರೆ, ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸಲು ಹೊಸ ಸೇತುವೆಯಲ್ಲಿ ಅನುವು ಮಾಡಿಕೊಡಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಮಹಾರಾಷ್ಟ್ರದ ಪನ್ವೇಲ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಸೇತುವೆ ಇದಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ಇನ್ನೂ ಹೆಚ್ಚಿರುತ್ತದೆ.
ನಾವು ನಿತ್ಯ ಸಂಚರಿಸುವಾಗ ಈ ಸೇತುವೆಯ ಅಲ್ಲಲ್ಲಿ ಫುಟ್‌ಪಾತ್, ತಡೆಗೋಡೆಗೆ ಹಾನಿಯಾಗಿರುವುದನ್ನು ಕಂಡಾಗ ಭಯವಾಗುತ್ತದೆ. ಆದಷ್ಟು ಬೇಗ ದುರಸ್ತಿ ಮಾಡದಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಫುಟ್‌ಪಾತ್‌ನಲ್ಲೂ ಶಾಲಾ ಮಕ್ಕಳು, ಪಾದಯಾತ್ರೆ ಮಾಡುವ ಅನೇಕ ಮಂದಿ ನಡೆದುಕೊಂಡು ಹೋಗುತ್ತಾರೆ. ಶೀಘ್ರ ದುರಸ್ತಿಗೆ ಮುಂದಾಗಬೇಕು.-ಸಂದೀಪ್, ಆಟೋ ಚಾಲಕ ತಲ್ಲೂರು
ತಲ್ಲೂರು ಸಮೀಪದ ಹೇರಿಕುದ್ರು ಸೇತುವೆ ತಡೆಗೋಡೆ ಹಾಗೂ ಫುಟ್‌ಪಾತ್‌ಗೆ ಹಾನಿಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ೂಡಲೇ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.-ರಶ್ಮಿ ಎಸ್.ಆರ್., ಕುಂದಾಪುರ ಸಹಾಯಕ ಆಯುಕ್ತೆ