

ಚನ್ನರಾಯಪಟ್ಟಣ: ರಾಜ್ಯದಲ್ಲಿ ಯುವ ಸಮುದಾಯ ಸೇರಿದಂತೆ ಪಕ್ಷವನ್ನು ಬೆಳೆಸುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಪ್ರಮುಖ ಎಂದು ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್ ಹೇಳಿದರು.
ಕೆಪಿಸಿಸಿ ನೂತನ ಅಧ್ಯಕ್ಷ ರಾಗಿ ಡಿ.ಕೆ.ಶಿವಕುಮಾರ್ ಅವರು ಪ್ರತಿಜ್ಞಾ ವಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ದಿಡಗ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಕೆಶಿ ಹಿರಿಯ ಹಾಗೂ ಕಿರಿಯರಿಗೆ ಸಮಾನತೆಯ ಸ್ಥಾನಮಾನ ಹಾಗೂ ಗೌರವ ನೀಡುವ ನಾಯಕರಾಗಿದ್ದಾರೆ ಎಂದರು.
ನಾಯಕತ್ವ ಗುಣ ಇರುವವರನ್ನು ಗುರುತಿಸಿ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು ಸುಭದ್ರಗೊಳಿಸುಲ್ಲಿ ಚಾಣಾಕ್ಷತೆ ಹೊಂದಿರುವ ಡಿ.ಕೆ.ಶಿವಕುಮಾರ್ ಅವರು ಬೂತ್ ಮಟ್ಟದಿಂದಲೂ ಪಕ್ಷವನ್ನು ಗಟ್ಟಿಗೊಳಿಸುವ ನಿರ್ಧಾರ ಕೈಗೊಂಡಿರುವುದು ಪಕ್ಷದ ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದರು.
ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಸಭಾಂಗಣದಲ್ಲಿ ಟಿವಿ ವ್ಯವಸ್ಥೆ ಮಾಡಲಾಗಿತ್ತು. ಚನ್ನರಾಯಪಟ್ಟಣ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಟಿ.ಬೊಮ್ಮೇಗೌಡ, ಕಾಂಗ್ರೆಸ್ ಯುವ ಮುಖಂಡ ರಾಕೇಶ್, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.