ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪ್ರಮಾಣ, ಮುಕ್ತಿಮಂದಿರ ಭಕ್ತರಲ್ಲಿ ಹರ್ಷ

20 lxr-1
Published on

ಲಕ್ಷ್ಮೇಶ್ವರ: ತಾಲೂಕಿನ ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದ ಲಿಂಗೈಕ್ಯ ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣವಚನ ಸ್ವೀಕರಿಸಿದ್ದು, ಮಠದ ಭಕ್ತರಲ್ಲಿ ಹರ್ಷ ಮೂಡಿಸಿದೆ.
ಲಿಂ.ವೀರಗಂಗಾಧರ ಜಗದ್ಗುರುಗಳ ತಪೋಭೂಮಿ, ಪಾವನ ಕ್ಷೇತ್ರ ಮುಕ್ತಿಮಂದಿರ ಧರ್ಮಕ್ಷೇತ್ರ ಮತ್ತು ಅವರ ಪ್ರತಿರೂಪವೇ ಆದ ನೊಣವಿನಕೇರಿ ಕಾಡಸಿದ್ಧೇಶ್ವರ ಮಠದ ಬಗ್ಗೆ ಶ್ರದ್ಧೆ, ಭಕ್ತಿ, ನಂಬಿಕೆ ಹೊಂದಿರುವ ಡಿ.ಕೆ. ಶಿವಕುಮಾರ ಅವರು, ತಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟ-ಸುಖಗಳಲ್ಲೂ ಲಿಂ.ಗಂಗಾಧರ ಜಗದ್ಗುರುಗಳನ್ನು ನೆನೆಯುತ್ತಾರೆ.
ಡಿಕೆಶಿ ಅವರ ಮನೆ, ಕಚೇರಿಗಳಲ್ಲಿ ಗಂಗಾಧರ ಜಗದ್ಗುರುಗಳ ಭಾವಚಿತ್ರವಿದೆ. ಶನಿವಾರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲೂ ಅವರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿದೆ. 2019ರಲ್ಲಿ ಕುಂದಗೋಳ ಮತ್ತ ಹಾನಗಲ್ ಕ್ಷೇತ್ರದ ಉಪಚುನಾವಣೆ ವೇಳೆ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಅವರು ಮೇ 15ರಂದು ತಮ್ಮ ಜನ್ಮದಿನವನ್ನು ಮುಕ್ತಿಮಂದಿರದಲ್ಲಿ ಆಚರಿಸಿಕೊಂಡಿದ್ದರು. ಆಗ ಎರಡೂ ಕ್ಷೇತ್ರದಲ್ಲಿ ಪಕ್ಷಕ್ಕೆ ಜಯ ಲಭಿಸಿತ್ತು. ಈ ವೇಳೆ ಅವರು ನನ್ನ ಇಷ್ಟಾರ್ಥ ಸಿದ್ಧಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧ ಎಂದಿದ್ದರು. ಮುಕ್ತಿಮಂದಿರ ಧರ್ಮ ಕ್ಷೇತ್ರದ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ಕ್ಷೇತ್ರದಲ್ಲಿ ಬೃಹತ್ ಸಮುದಾಯ ಭವನಕ್ಕೆ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆಗೆ ಸಹಾಯ ಸಲ್ಲಿಸುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಮಂತ್ರಿಗಳು ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ತಮ್ಮ ಇಷ್ಟ ದೇವರು, ರೈತರು ಇನ್ನಿತರ ಹೆಸರುಗಳಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಒಕ್ಕಲಿಗ ಸಮಾಜದ ಡಿ.ಕೆ. ಶಿವಕುಮಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಗಂಗಾಧರ ಜಗದ್ಗುರುಗಳ ದೇವತಾಶಕ್ತಿಗೆ ಸಾಕ್ಷಿಯಾಗಿದೆ. ಅವರ ತತ್ವ, ಸಿದ್ಧಾಂತ, ಧರ್ಮಬೋಧನೆ, ತಪೋಶಕ್ತಿಗೆ ಮನಸೋತ ಡಿ.ಕೆ. ಶಿವಕುಮಾರ, ಜಗದ್ಗುರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ರಂಭಾಪುರಿ ಜಗದ್ಗುರುಗಳು ಮತ್ತು ಭಕ್ತರಲ್ಲಿ ಹರ್ಷ ಮೂಡಿಸಿದೆ. ಅವರ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲಿ.ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಬಾಳೆಹೊನ್ನೂರು

ಮಹಾ ತಪಸ್ವಿ, ನಡೆದಾಡುವ ದೇವರು ಲಿಂ.ವೀರಗಂಗಾಧರ ಜಗದ್ಗುರುಗಳ ಬಗ್ಗೆ ಡಿ.ಕೆ. ಶಿವಕುಮಾರ ಅವರಿಗೆ ಅತ್ಯಂತ ಶ್ರದ್ಧೆ, ಭಕ್ತಿ, ನಂಬಿಕೆಯಿದೆ. ಕಷ್ಟ- ಸುಖದಲ್ಲಿ ಅವರನ್ನು ನೆನೆಯದೇ ಇರಲಾರರು. ಜಗದ್ಗುರುಗಳ ಮೇಲಿನ ಭಕ್ತಿಯಿಂದ ಅವರ ತಪೋಭೂಮಿಯ ಮೇಲೂ ಗೌರವವಿದೆ. ಅನೇಕ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಅನುದಾನ ನೀಡಿದ್ದಾರೆ. ಅವರು ಡಿಸಿಎಂ ಆಗಿರುವುದು ಸಂತಸ ತಂದಿದೆ.ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಮುಕ್ತಿಮಂದಿರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net