ಡಿಕೆಶಿ, ಎಚ್ಡಿಕೆ ಜೋಡೆತ್ತುಗಳಲ್ಲ ಕಳ್ಳೆತ್ತು: ಕಂದಾಯ ಸಚಿವ ಆರ್.ಅಶೋಕ್ ಟೀಕೆ

14.03.2023 SDLP 05
Published on

ಶಿಡ್ಲಘಟ್ಟ: ‘‘ಅಲ್ಲಿ ಜೋಡೆತ್ತು, ಇಲ್ಲಿ ಫೈಟಿಂಗು’. ಇಂಥವರನ್ನು ನಂಬಬಾರದು. ಡಿಕೆಶಿ ಎಚ್ಡಿಕೆ ಜೋಡೆತ್ತುಗಳಲ್ಲ ಬದಲಿಗೆ ಕಳ್ಳೆತ್ತುಗಳು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.
ನಗರದ ಕೋಟೆ ವೃತ್ತದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹದಿನಾಲ್ಕು ತಿಂಗಳು ಅಧಿಕಾರ ನಡೆಸಲು ಯೋಗ್ಯತೆಯಿಲ್ಲದೇ ಇದ್ದುದರಿಂದ ಕಾಂಗ್ರೆಸ್, ಜೆಡಿಎಸ್ ಬಿಟ್ಟು ನಮ್ಮ ಪಕ್ಷಕ್ಕೆ 17 ಶಾಸಕರು ಬಂದರು. ಕ್ಷೇತ್ರ ಅಭಿವೃದ್ಧಿಯಾಗಬೇಕೆಂದರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ. ಪ್ರಧಾನಿ ನರೇಂದ್ರ ಮೋದಿ ಅವರಂತಹ ವಿಶ್ವನಾಯಕನನ್ನು ಸೋಲಿಸಲಾಗದ ರಾಹುಲ್ ಗಾಂಧಿಯ ಪಕ್ಷಕ್ಕೆ ಮತ ಏಕೆ ಹಾಕ್ತೀರ. ಶಿಡ್ಲಘಟ್ಟದಲ್ಲಿ ಕಮಲ ಅರಳಿದರೆ ಅಭಿವೃದ್ಧಿ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ 34 ಸಾವಿರ ಉಚಿತ ನಿವೇಶನ ಕೊಟ್ಟೆವು. ಅದರಲ್ಲಿ ಶೇ.30ರಷ್ಟು ಮುಸ್ಲಿಮರಿದ್ದರು. ನಿಮ್ಮ ಕ್ಷೇತ್ರದಲ್ಲಿ ಈ ಉಚಿತ ನಿವೇಶನಗಳನ್ನು ನೀಡದ ಶಾಸಕರನ್ನು ನೀವು ಮತ್ತೆ ಏಕೆ ಆಯ್ಕೆ ಮಾಡುತ್ತೀರಿ ಎಂದು ಜನರನ್ನು ಅಶೋಕ್ ಪ್ರಶ್ನಿಸಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿ, ಬಿಜೆಪಿಗೆ ಮತ ಕೊಟ್ಟರೆ ಅಭಿವೃದ್ಧಿಗೆ ಮತ ಕೊಟ್ಟಂತೆ. ಒಳ್ಳೆಯ ಅಭ್ಯರ್ಥಿಯನ್ನು ನಿಮ್ಮ ಕ್ಷೇತ್ರಕ್ಕೆ ಕೊಡುತ್ತೇವೆ. ಆ ಸಮರ್ಥ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಿ. ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಯನ್ನು ನಾನು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಿಡ್ಲಘಟ್ಟದಲ್ಲಿ ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಮೋದಿ ಅವರ ದೂರದರ್ಶಿತ್ವದ ಮುದ್ರಾ ಯೋಜನೆಯಡಿ ಎರಡೂವರೆ ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಅದರಲ್ಲಿ ಶೇ.68ರಷ್ಟು ಸಾಲದ ಫಲಾನುಭವಿಗಳು ಅಲ್ಪಸಂಖ್ಯಾತರು. ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ಪ್ರತಿಯೊಬ್ಬರ ವಿಶ್ವಾಸ ಪಡೆದು, ಪರಿಶ್ರಮದಿಂದ ಮಾಡುವುದೇ ಬಿಜೆಪಿ ಆಶಯ ಎಂದರು.
ಶಿಡ್ಲಘಟ್ಟದಲ್ಲಿ ಜೆಡಿಎಸ್ ನಮಗಿಂತ ಮುಂದಿದೆ ಎಂಬ ಸಂಗತಿ ನಮಗೆ ಗೊತ್ತು. ಜೆಡಿಎಸ್ ಗೆದ್ದರೂ ರಾಜ್ಯದಲ್ಲಿ ಸರ್ಕಾರ ಬರುವುದಿಲ್ಲ. ಅವರು ಕಾಯುತ್ತಿರುವುದು ಸಮ್ಮಿಶ್ರ ಸರ್ಕಾರ ಮಾಡಲೆಂದು. ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಆಗುವುದಿಲ್ಲ. ಶಿಡ್ಲಘಟ್ಟಕ್ಕೆ 75 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಅನುಮೋದನೆ, ತಾಲೂಕಿನಲ್ಲು 200 ಕೋಟಿ ರೂ. ವೆಚ್ಚದಲ್ಲಿ ಉತ್ತರ ವಿಶ್ವವಿದ್ಯಾನಿಲಯ ಸ್ಥಾಪನೆ, ಜಂಗಮಕೋಟೆಯಲ್ಲಿ ಮಾಡ್ಯುಲಾರ್ ಆಸ್ಪತ್ರೆ ಸ್ಥಾಪನೆ, ಸಾದಲಿಯಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರ ಮಾಡಿರುವುದು ಬಿಜೆಪಿ ಸರ್ಕಾರ ಎಂಬುದನ್ನು ಮರೆಯದಿರಿ ಎಂದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಗೋವಿಂದಗೌಡ ಅವರನ್ನು ನಿಮ್ಮ ಶಾಸಕ ವಿ.ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂದು ಸೂಚಿಸಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್, ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟಕ್ಕೆ ಕಳಿಸಿದ್ದಾರೆ. ಈ ಗೊಂದಲದಿಂದ ಕಾಂಗ್ರೆಸ್ ಮುಳುಗಿದ್ದರೆ, ಜೆಡಿಎಸ್‌ನಲ್ಲಿ ದೊಡ್ಡಗೌಡ ಮತ್ತು ಚಿಕ್ಕಗೌಡರಿಗೆ ಯಾರು ಹಣ ನೀಡುತ್ತಾರೋ ಅವರಿಗೆ ಟಿಕೆಟ್ ಕೊಡುತ್ತಾರೆ. ಅಭಿವೃದ್ಧಿ ಮಂತ್ರ ಪಠಿಸುವುದು ಬಿಜೆಪಿ ಮಾತ್ರ ಎಂದು ಹೇಳಿದರು.

ಅದ್ದೂರಿ ಮೆರವಣಿಗೆ
ಬಿಜೆಪಿ ಸಂಕಲ್ಪ ಯಾತ್ರೆಯು ಚಿಂತಾಮಣಿಯಿಂದ ಶಿಡ್ಲಘಟ್ಟಕ್ಕೆ ಆಗಮಿಸಿದಾಗ ಆಂಜನೇಯಸ್ವಾಮಿ ದೇವಾಲಯದ ಬಳಿ ಹೂವುಗಳನ್ನು ಚೆಲ್ಲಿ ಸ್ವಾಗತಿಸಲಾಯಿತು. ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಸಂಸದ ಮುನಿಸ್ವಾಮಿ, ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಯೂರ ವೃತ್ತದಲ್ಲಿ ಬಿಜೆಪಿಯಿಂದ ಸೇವಾಕಾರ್ಯಗಳನ್ನು ನಡೆಸಲು ನಿರ್ಮಿಸಿರುವ ‘‘ಸೇವಾ ಸೌಧ’ ಉದ್ಘಾಟಿಸಿ, ಪೂಜೆಯಲ್ಲಿ ಪಾಲ್ಗೊಂಡರು. ಮಯೂರ ವೃತ್ತದಿಂದ ಬಿಜೆಪಿ ಸಂಕಲ್ಪ ಯಾತ್ರೆ ಆರಂಭ ಮಾಡಲಾಯಿತು. ಗಣ್ಯರಿಗೆ ಕ್ರೇನ್‌ನಲ್ಲಿ ಬೃಹತ್ ಹೂವಿನ ಹಾರ ಹಾಕಿ, ಹೂಚೆಲ್ಲಿ, ಪಟಾಕಿ ಸಿಡಿಸುತ್ತಾ, ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕೋಟೆ ವೃತ್ತದವರೆಗೂ ಕರೆದೊಯ್ಯಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ
ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ನಿವೃತ್ತರಾಗುತ್ತಾ ಮಗನನ್ನು ಚುನಾವಣೆಗೆ ನಿಲ್ಲಿಸಬಹುದೆಂದು ಅಂದುಕೊಂಡಿದ್ದೆ. ಆದರೆ ಅವರು ಶ್ರೀನಿವಾಸಪುರ ತಾಲೂಕಿನ ಗೋವಿಂದಗೌಡ ಅವರ ಹೆಸರನ್ನು ಸೂಚಿಸಿದ್ದಾರೆ. ಅವರಿಗೂ ಶಿಡ್ಲಘಟ್ಟಕ್ಕೂ ಸಂಬಂಧವೇ ಇಲ್ಲ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಜೆಡಿಎಸ್‌ನೊಂದಿಗೆ. ಹಿಂದೆ ರಾಜಣ್ಣ ಗಡ್ಡ ಬಿಟ್ಟು ಅನುಕಂಪದಿಂದ ಗೆದ್ದಿದ್ದರು. ಇದೀಗ ಅದೇ ಅನುಕಂಪದಿಂದ ಜೆಡಿಎಸ್ ಮತ ಕೇಳಲು ಬರುತ್ತಿದೆ. ಅಭಿವೃದ್ಧಿ ಮಂತ್ರ ಜಪಿಸುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಸಚಿವ ಸುಧಾಕರ್ ಮನವಿ ಮಾಡಿದರು.

ರಾಹುಲ್ ಗಾಂಧಿಗೆ ಸ್ವಾಮಿ ವಿವೇಕಾನಂದ ಆದರ್ಶವಾಗಬೇಕು. ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತನಾಡುವುದು ಸರಿಯಿಲ್ಲ. ಯಾವುದೇ ಕಾರಣಕ್ಕೂ ನಾವು ಮತಾಂದ, ನರಹಂತಕ ಟಿಪ್ಪು ವಿಶ್ವವಿದ್ಯಾಲಯ ಮಾಡಲು ಬಿಡಲ್ಲ. ದೇಶದಲ್ಲಿ ಯಾರಾದರೂ ಅಹಿಂದ ವಿರೋಧಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ.

ಎಸ್.ಮುನಿಸ್ವಾಮಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net