

ಹುಬ್ಬಳ್ಳಿ: ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ದುರ್ಗಾ ಪಿ.ಎಸ್. ಹಾಗೂ ಹೊನ್ನವಳ್ಳಿ ಶ್ರೀಕಾಂತ ಅವರು ಜಂಟಿಯಾಗಿ ನಿರ್ದೇಶಿಸಿರುವ ದಿಗ್ವಿಜಯ ಚಿತ್ರವು ಸೆ. 22ರಂದು ರಾಜ್ಯಾದ್ಯಂತ 25 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸದಸ್ಯ ಡಾ. ಎಂ.ಎ. ಮುಮ್ಮಿಗಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜೀವನಾಧಾರಿತ ಈ ಚಿತ್ರದಲ್ಲಿ ಆತ್ಮಹತ್ಯೆ ಹಾಗೂ ಅದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಚಿತ್ರಿಸಲಾಗಿದೆ. ಒಬ್ಬ ವರದಿಗಾರ ಸಮಾಜದ ಸಮಸ್ಯೆಯನ್ನು ಹೇಗೆ ಬಗೆ ಹರಿಸಬಹುದು ಎಂಬುದನ್ನು ಹೇಳಲಾಗಿದೆ ಎಂದರು.
ಜೆ.ಪಿ. ಎಂಟರ್ಟೇನ್ಮೆಂಟ್ ಅಡಿ ಜಯಪ್ರಭು ಆರ್. ಲಿಂಗಾಯತ್, ಅರುಣ ಸುಕದರ್ ಹಾಗೂ ಹರೀಶ್ ಆರ್.ಸಿ. ಅವರು ಚಿತ್ರ ನಿರ್ಮಾಣ ಮಾಡಿದ್ದು, ಗೋವಾ ಫಿಲಂ ಫೆಸ್ಟಿವಲ್ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಹಾಗೂ ನಾಯಕನಿಗೆ ಬೆಸ್ಟ್ ಹೀರೋ ಪ್ರಶಸ್ತಿ ಬಂದಿದೆ ಎಂದರು.
ದುರ್ಗಾ ಪಿ.ಎಸ್. ಹಾಗೂ ಹೊನ್ನವಳ್ಳಿ ಶ್ರೀಕಾಂತ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜತೆ ನಿರ್ದೇಶನ ಕೂಡ ಮಾಡಿದ್ದಾರೆ. ಜಯಪ್ರಭು ಲಿಂಗಾಯತ್ ಅವರೇ ನಾಯಕನಾಗಿ ನಟಿಸಿದ್ದಾರೆ. ಸ್ನೇಹಾ ನಾಯಕಿಯಾಗಿದ್ದಾರೆ. ಸುಚೇಂದ್ರ ಪ್ರಸಾದ್, ಪಟ್ರೆ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಸುಜಾತಾ ಹಿರೇಮಠ, ಯಶೋಧ, ಶಿವಕುಮಾರ್ ಆರಾಧ್ಯ, ದುಬೈ ರಫೀಕ್ ಇತರರು ತಾರಾಗಣದಲ್ಲಿದ್ದಾರೆ.
ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದೆ. 5 ಹಾಡುಗಳಿದ್ದು, ಹರ್ಷ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ಸೂಪರ್ ಸುಬ್ಬು, ಡ್ಯಾನ್ಸ್ ಮಾಸ್ಟರ್ ಜಗ್ಗು ಸಾಹಸ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದರು. ನಿರ್ಮಾಪಕ ಅರುಣ ಸುಕದರ್, ಸುಶೀಲ್, ಡಾ. ವಿಶ್ವನಾಥ ಪಲ್ಲೇದ, ರವೀಂದ್ರ, ಅಮಿತ್ ಗೋಷ್ಠಿಯಲ್ಲಿದ್ದರು.