ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ ವರ್ಷಾಂತ್ಯದಲ್ಲಿ ಪೂರ್ಣ : ಸಚಿವ ಕೃಷ್ಣಭೈರೇಗೌಡ

minister krishnabairegouda alliged bjp mps drought relief programme koppal visit
KRISHNABAIREGOUDA
Published on

ಮೈಸೂರು: ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣ ಅಭಿಯಾನ ಪ್ರಾರಂಭಿಸಲಾಗಿದ್ದು, ವರ್ಷಾಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಕಲಿ ಭೂ ದಾಖಲೆ ಸೃಷ್ಟಿಸುವುದು, ದಾಖಲೆ ತಿದ್ದುವುದು, ಮೂಲ ದಾಖಲಾತಿ ಕಾಣೆಯಾಗುವ ಪ್ರಕರಣಗಳು ಕಂಡು ಬರುತ್ತಿದೆ. ದಾಖಲೆಗಳ ಡಿಜಿಟಲೀಕರಣವಾದರೆ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ದಾಖಲೆಗಳು ಡಿಜಿಟಲೀಕರಣಗೊಂಡರೆ ಜನರು ಎದುರಿಸುತ್ತಿರುವ ಶೋಷಣೆ ತಪ್ಪಲಿದೆ. ಜನರು ಮುಂದಿನ ದಿನಗಳಲ್ಲಿ ರೆಕಾರ್ಡ್ ರೂಂ ಸಂಪರ್ಕಿಸದೆ ಆನ್‌ಲೈನ್ ಮೂಲಕವೇ ದಾಖಲೆಗಳನ್ನು ಪಡೆಯಬಹುದು ಎಂದರು.

ರಾಜ್ಯದಲ್ಲಿ ಲಕ್ಷಾಂತರ ಭೂ ಖಾತೆಗಳು ಅಜ್ಜನ, ತಂದೆಯ ಹೆಸರಿನಲ್ಲಿ ಉಳಿದಿದ್ದು, ಪೌತಿ ಖಾತೆ ಆಗಬೇಕಾಗಿದೆ. ಕುಟುಂಬದ ಸದಸ್ಯರು ಒಪ್ಪಿದರೆ ಸ್ಥಳದಲ್ಲಿಯೇ ಖಾತೆ ಮಾಡಿಕೊಡುತ್ತೇವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪೌತಿ ಖಾತೆ ಆಂದೋಲನವನ್ನು ಪ್ರಾಯೋಗಿ ಕವಾಗಿ ಆರಂಭಿಸಲಾಗಿದ್ದು, ಇದರ ಸಾಧಕಬಾಧಕಗಳನ್ನು ನೋಡಿಕೊಂಡು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.

ತಹಶೀಲ್ದಾರ್ ನ್ಯಾಯಾಲಯದ ವ್ಯಾಜ್ಯಗಳನ್ನು ಅರೆ ನ್ಯಾಯಿಕ ಪ್ರಕರಣಗಳೆಂದು ಕರೆಯಲಾಗುತ್ತದೆ. ಅಲ್ಲಿನ ಪ್ರಕರಣಗಳನ್ನು ಸೀಮಿತ ಅವಧಿಯಲ್ಲಿ ಮುಗಿಸುವಂತೆ ಹೇಳಲಾಗುವುದಿಲ್ಲ. ಆದರೂ ರಾಜ್ಯದ ಎಲ್ಲ ತಹಸಿಲ್ದಾರ್‌ಗಳಿಗೆ ಜನವರಿ ಅಂತ್ಯದೊಳಗೆ 90 ದಿನಗಳನ್ನು ಮೀರಿದ ಯಾವುದೇ ಪ್ರಕರಣಗಳು ಇರಬಾರದೆಂದು ಗುರಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತಹಸಿಲ್ದಾರ್, ಉಪ ಆಯುಕ್ತರು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಒಂದು ವರ್ಷ ಮೀರಿದ ಸಾಕಷ್ಟು ಪ್ರಕರಣಗಳು ಇದ್ದವು. 4 ತಿಂಗಳಲ್ಲಿ 33 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ರೈತರ ಖಾತೆಗೆ ಬರ ಪರಿಹಾರದ ಹಣ ಜಮೆ ಮಾಡಲಾಗುತ್ತಿದ್ದು, ಇದುವರೆಗೆ 550 ಕೋಟಿ ರೂ. ಜಮೆ ಮಾಡಲಾಗಿದೆ. ಒಂದು ವಾರದೊಳಗೆ ಮೊದಲ ಕಂತಿನ ಹಣ ರೈತರಿಗೆ ತಲುಪಲಿದೆ. ಬೆಳೆ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯದ ಮನವಿ ಬಗ್ಗೆ ಕೇಂದ್ರ ಈವರೆಗೂ ಯಾವುದೇ ತೀರ್ಮಾನ ಮಾಡಿಲ್ಲ. ಕೇಂದ್ರ ಸರ್ಕಾರ ಡಿ.23 ರಂದು ಕರೆದಿದ್ದ ಸಭೆಯೂ ರದ್ದಾಗಿದ್ದು, ಮಂಗಳವಾರದ ಸಭೆಯೂ ನಡೆದಿಲ್ಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net