

ಮಂಗಳೂರು: ಪ್ರತಿ ಜಿಲ್ಲೆಯಲ್ಲಿ ಒಂದು ಹಳ್ಳಿಯನ್ನು ಡಿಜಿಟಲ್ ವಿಲೇಜ್ ಆಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದೆ. ಅದಕ್ಕೆ ಪೂರಕವಾಗಿ ಭಾರತ್ ನೆಟ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ದೇಶದ 6 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆ ತಲುಪಲಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜನಾಶೀರ್ವಾದ ಯಾತ್ರೆಯಲ್ಲಿ ದ.ಕ ಜಿಲ್ಲೆಗೆ ಆಗಮಿಸಿರುವ ಅವರು, ವಿವಿಧ ಸಭೆ, ಸಂವಾದಗಳಲ್ಲಿ ಪಾಲ್ಗೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ನಂತದ ಬೆಳವಣಿಗೆಯಲ್ಲಿ ಡಿಜಿಟಲ್ ಕ್ಷೇತ್ರ ಮೂರು, ನಾಲ್ಕು, ಐದು ಪಟ್ಟು ಹೆಚ್ಚು ವೃದ್ಧಿಯಾಗಿದೆ. ಮನೆಯಿಂದಲೇ ಕೆಲಸ ಪರಿಕಲ್ಪನೆಯಿಂದ ಕೇಂದ್ರೀಕೃತವಾಗಿದ್ದ ಉದ್ಯೋಗವಕಾಶಗಳು ಗ್ರಾಮೀಣ ಭಾಗ ವಿವಿಧೆಡೆ ಹಂಚಿ ಹೋಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಯಾಗಬೇಕಾದ ಅವಶ್ಯಕತೆಯಿದೆ ಎಂದರು.
ಐಟಿ ಕಂಪನಿಗಳು ಬೆಂಗಳೂರು, ಹೈದರಾಬಾದ್, ಚೆನ್ನೈನಂತಹ ಮಹಾನಗರಗಳನ್ನು ಬಿಟ್ಟು ದ್ವಿತೀಯ, ತೃತೀಯ ಹಂತದ ನಗರಗಳತ್ತ ಬರಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಹಲವು ಬೃಹತ್ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಅವರಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಿಕೊಡಲು ಸರ್ಕಾರ ಬದ್ಧವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನರಿಗೆ ಹೆಚ್ಚಿನ ಉದ್ಯೋಗ ಲಭ್ಯವಾಗುವಂತೆ ಮಾಡುವುದು ನರೇಂದ್ರ ಮೋದಿಯವರ ಪ್ರಮುಖ ಉದ್ದೇಶವೂ ಆಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಎಸ್. ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.