

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಾರ್ವಜನಿಕರಿಗೆ ವಿತರಿಸುವ ನಿವೇಶನಗಳ ದಾಖಲಾತಿ ಹಾಗೂ ಇತರ ಪ್ರಮಾಣಪತ್ರಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಎಲ್ಲ ವಿಭಾಗಗಳಿಗೂ ವಿಸ್ತರಿಸಲು ನಿರ್ಧರಿಸಿದೆ.
ಕಾಗದರಹಿತ ಕಚೇರಿ ಯೋಜನೆಯ ಭಾಗವಾಗಿ ಈ ವರ್ಷದ ಮಾರ್ಚ್‌ನಲ್ಲಿ ಪ್ರಾಯೋಗಿಕವಾಗಿ ದಾಖಲಾತಿಗಳನ್ನು ಡಿಜಿಟಲ್ ರೂಪಕ್ಕೆ ವರ್ಗಾಯಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಪ್ರಾಧಿಕಾರ ಹಾಗೂ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ದೃಢಪಟ್ಟಿದೆ. ಇದನ್ನಾಧರಿಸಿ ಎಲ್ಲ ವಿಭಾಗಗಳಿಗೂ ವಿಸ್ತರಿಸಲು ನೂತನ ಆಯುಕ್ತ ಎನ್.ಜಯರಾಮ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಾಖಲಾತಿಗಳಿಗೆ ಡಿಜಿಟಲ್ ರೂಪ ನೀಡುವುದರಿಂದ ಪ್ರಮುಖವಾಗಿ ಸೈಟ್‌ಗಳ ವಿಚಾರದಲ್ಲಿ ಆಗುತ್ತಿದ್ದ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗಲಿದೆ. ದಾಖಲಾತಿಗಳನ್ನು ಡಿಜಿಟಲ್ ಮಾಡುವುದರಿಂದ ನಕಲಿ ದಾಖಲೆ ಸೃಷ್ಟಿಸುವ ಅಥವಾ ಮಾಹಿತಿ ತಿದ್ದುವ ಪ್ರಕರಣಗಳಿಗೆ ತೆರೆಬೀಳಲಿದೆ. ಇಂತಹ ವ್ಯವಸ್ಥೆ 4 ವರ್ಷಗಳ ಹಿಂದೆಯೇ ಆರಂಭಿಸಿದ್ದರೂ, ಸ್ವಂತ ಸ್‌ಟಾವೇರ್ ಬಳಸುತ್ತಿದ್ದ ಕಾರಣ ಎಲ್ಲ ದಾಖಲಾತಿಯನ್ನು ದತ್ತಾಂಶದಲ್ಲಿ ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. ಈಗ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಸ್‌ಟಾವೇರ್ ಮೇಲ್ದರ್ಜೆಗೇರಿಸಿದ್ದು, ಹಂತ ಹಂತವಾಗಿ ಎಲ್ಲ ವಿಭಾಗಗಳ ದಾಖಲಾತಿಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸಲು ಸಾಧ್ಯವಾಗಲಿದೆ.
ಕಡತ ನಾಪತ್ತೆ ಪ್ರಕರಣಗಳಿಗೆ ಬ್ರೇಕ್:
ಪ್ರಸ್ತುತ ಕಂಪ್ಯೂಟರ್ ವ್ಯವಸ್ಥೆ ಒಳಗೊಂಡಂತೆ ಇಡಿಪಿ ವಿಭಾಗದಿಂದ ದಾಖಲಾತಿಗಳನ್ನು ಸ್ಕಾೃನ್ ಮಾಡುವ ಪದ್ಧತಿ ಜಾರಿಯಲ್ಲಿದೆ. ಆಯಾ ಕಡತಗಳು ವಿಭಾಗ ಮುಖ್ಯಸ್ಥರಿಂದ ಆಯುಕ್ತರ ಕಚೇರಿಗೆ ರವಾನೆಯಾಗುವ ಮುನ್ನ ಪ್ರತೀ ಕಡತದಲ್ಲಿನ ಎಲ್ಲ ಪುಟಗಳನ್ನು ಸ್ಕಾೃನ್ ಮಾಡಲಾಗುತ್ತಿದೆ. ಇದರಿಂದ ಕಡತ ಕಳೆದುಹೋದ ಬಗ್ಗೆ ನಪ ಹೇಳುವ ಅಥವಾ ನಾಪತ್ತೆಯಾಗಿದೆ ಎಂದು ಹೊಸ ಕಡತ ಸೃಷ್ಟಿಸುವ ಪ್ರಕರಣಗಳು ಕಡಿಮೆಯಾಗಿವೆ.
ಮುಂದಿನ ದಿನಗಳಲ್ಲಿ ನಿವೇಶನಗಳ ಸೇಲ್ ಡೀಡ್ ದಾಖಲಾತಿಗಳನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸಲಾಗುತ್ತದೆ. ಒಂದು ವೇಳೆ ಈ ದಾಖಲೆಗಳನ್ನು ಸಾರ್ವಜನಿಕರು ಕಳೆದುಕೊಂಡಲ್ಲಿ ನಕಲು ದಾಖಲಾತಿ ನೀಡಲು ಮೂಲ ದಾಖಲಾತಿಯನ್ನು ಆಧಾರವಾಗಿಟ್ಟುಕೊಳ್ಳಲು ಅವಕಾಶವಾಗಲಿದೆ. ಜತೆಗೆ ಡಿಜಿಟಲ್ ದಾಖಲಾತಿಗಳನ್ನು ಕಡಿಮೆ ಅವಧಿಯಲ್ಲಿ ಜನರಿಗೆ ನೀಡಲು ಸಾಧ್ಯವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.