ಕಳ್ಳತನ ತಪ್ಪಿಸಿದ ಡಿಜಿಟಲ್ ತಂತ್ರಜ್ಞಾನ..!

Digital technology prevents theft..!
ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಸರ್ಕಾರಿ ಅಭಿಯೋಜಕರ ಮನೆಗೆ ಕನ್ನ ಹಾಕಿದ ಕಳ್ಳರ ತಂಡದ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು.
Published on

ಜಮಖಂಡಿ: ಡಿಜಿಟಲ್ ತಂತ್ರಜ್ಞಾನ ಸದ್ಬಳಕೆ ಮತ್ತು ದುರ್ಬಳಕೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ತಂತ್ರಜ್ಞಾನ ಬಳಸಿ ತಮ್ಮ ಮನೆ ಕಳ್ಳತನವಾಗದಂತೆ ಮಾಲೀಕರೊಬ್ಬರು ಜಾಗ್ರತೆವಹಿಸಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ.

ಇಂಥ ಒಂದು ಘಟನೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ನಡೆದಿದೆ. ಮನೆಗೆ ಕನ್ನ ಹಾಕಿ ಕಳ್ಳತನ ಮಾಡಲು ಯತ್ನಿಸಿದ ಕಳ್ಳರ ಕರಾಮತ್ತಿನ ದೃಶ್ಯಗಳು ಡಿಜಿಟಲ್ ತಂತ್ರಜ್ಞಾನದಿಂದಾಗಿ ಮಾಲೀಕರ ಮೊಬೈಲ್‌ಗೆ ರವಾನೆಯಾಗಿವೆ. ಅದರಿಂದ ತಕ್ಷಣ ಎಚ್ಚೆತ್ತುಕೊಂಡ ಮಾಲೀಕರು ತಮ್ಮ ಮನೆಗೆ ಆಗಮಿಸಿದಾಗ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಯಾವುದೇ ವಸ್ತುಗಳು ಕಳ್ಳತನವಾಗದಿರುವುದು ಮಾಲೀಕರಲ್ಲಿ ಹರ್ಷ ಮೂಡಿಸಿದೆ.

ಗಣೇಶ ನಗರದ ನಿವಾಸಿ, ವಿಜಯಪುರ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ಅಭಿಯೋಜಕ (ವಕೀಲ) ಶಶಿಧರ ರಾಠೋಡ ಅವರು ಸಂಬಂಧಿಕರೊಬ್ಬ ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ಕಳ್ಳರು ಅವರ ಮನೆ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ಕಳ್ಳರ ತಂಡ ಸಿಸಿ ಕ್ಯಾಮರಾ ಧ್ವಂಸಗೊಳಿಸಿ ಕಳ್ಳತನ ಮಾಡಲು ಮುಂದಾಗಿದ್ದಾರೆ. ಮನೆ ಮುಖ್ಯ ದ್ವಾರದ ಬೀಗ ಮುರಿದು ಒಳನುಗ್ಗಿ ಮನೆಯಲ್ಲಿರುವ ಎರಡು ಟ್ರೇಜರಿ ಮುರಿದು ಹಾಗೂ ಸೂಟ್‌ಕೇಸ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಮನೆಯಲ್ಲಿರುವ ಮತ್ತೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇದೇ ಕ್ಯಾಮರಾದ ದಶ್ಯಾವಳಿಗಳ ಮೆಸೇಜ್ ವಕೀಲರ ಮಗನ ಮೊಬೈಲ್‌ಗೆ ರವಾನೆಯಾಗಿವೆ. ತಕ್ಷಣ ತಂದೆ ಹಾಗೂ ಮಗ ಸೇರಿಕೊಂಡು ಮನೆಗೆ ಬಂದಿದ್ದಾರೆ. ಮಾಲೀಕರನ್ನು ನೋಡಿದ ತಕ್ಷಣ ಕಳ್ಳರು ಕಾಲ್ಕಿತ್ತಿದ್ದಾರೆ.

ಕಳ್ಳತನ ಮಾಡಲು ಬಂದ ತಂಡ ಬೇರೆ ಜಿಲ್ಲೆಯ ಪಾಸಿಂಗ್ ಇರುವ ಬೈಕ್ ಕಳ್ಳತನ ಮಾಡಿಕೊಂಡು ಬಂದಿದೆ. ತಮ್ಮ ಗುರುತು ಸಿಗದ ಹಾಗೆ ಮುಖಕ್ಕೆ ಮಂಕಿ ಕ್ಯಾಪ್, ಮಾಸ್ಕ್, ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿರುವ ದಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಳ್ಳರು ಅವಸರದಲ್ಲಿ ಪರಾರಿಯಾಗಲು ತಮ್ಮ ಬೈಕ್‌ನ್ನು ಬಿಟ್ಟು ಹೋಗಿದ್ದಾರೆ. ಮತ್ತೊಬ್ಬರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳದ ತಂಡ ಭೇಟಿ ನೀಡಿ ತನಿಖೆ ಮುಂದುವರಿಸಿದೆ. ಗ್ರಾಮೀಣ ಪೊಲೀಸ್ ಠಾಣೆ ಕ್ರೈಂ ಪಿಎಸ್‌ಐ ಎಂ.ಎಚ್.ಹೊಸಮನಿ, ಎಎಸ್‌ಐ ಅನೀಲ ಚವ್ಹಾಣ, ಸಿಬ್ಬಂದಿ ಸಿದ್ದು ಮೇಟಿ ತನಿಖೆಗೆ ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net