

ಮೈಸೂರು: ಡಿಜಿಟಲ್ ಆರೋಗ್ಯ ಸೇವೆಗಳ ಬಗ್ಗೆ ಅತಿ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಾಣಬಹುದಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿದರು.
ಶಾರದಾ ವಿಲಾಸ ಕಾಲೇಜು ಆಫ್ ಫಾರ್ಮಸಿಯಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತೀಯ ಸಾಂಪ್ರದಾಯಿಕ ಔಷಧಗಳು’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಅತಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕೃತಕ ಬುದ್ಧಿಮತ್ತೆ ಆರೋಗ್ಯ ವರ್ಧನೆ ಮತ್ತು ಔಷಧಿಗಳ ಸಂಶೋಧನೆಯಲ್ಲಿ ಹೆಚ್ಚು ಉಪಯೋಗ ಬರುತ್ತಿದೆ. ಹಾಗಾಗಿ ಔಷಧ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಗಜಾನನ ಹೆಗ್ಡೆ ಮಾತನಾಡಿ, ಭಾರತೀಯ ಔಷದ ಪದ್ಧತಿ ಹಲವಾರು ವರ್ಷಗಳಿಂದ ಜನರಿಗೆ ಉಪಯೋಗಕಾರಿಯಾಗಿದೆ. ಔಷಧೀಯ ಸಸ್ಯಗಳ ಮೇಲಿನ ಸಂಶೋಧನೆ ಶಾರದಾ ವಿಲಾಸ ಕಾಲೇಜು ಆ ಫಾರ್ಮಸಿಯಲ್ಲಿ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದರು.
ಇದೇ ವೇಳೆ ಗಣ್ಯರು ಅನಿಮಲ್ ಹೌಸ್ ಅನ್ನು ಉದ್ಘಾಟಿಸಿದರು. ಕೆಎಲ್ಇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸುನಿಲ್ ಎಸ್.ಜಲಾಲ್ ಪುರೆ ಹಾಗೂ ಪ್ರೊ.ರಾಜೇಂದ್ರ ಅವರು ವಿಷಯ ಮಂಡನೆ ಮಾಡಿದರು. ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ, ಕಾರ್ಯದರ್ಶಿ ಚಂದ್ರಶೇಖರ್ ಇತರರಿದ್ದರು.