

ವಿಜಯಪುರ: ರಾಜ್ಯದಲ್ಲಿ ಜೆಡಿಎಸ್ ಬಲವರ್ಧನೆಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ತನ್ನಿಮಿತ್ತ ಇದೀಗ ‘ಡಿಜಿಟಲ್ ಸದಸ್ಯತ್ವ ಅಭಿಯಾನ ಮತ್ತು ಜನರೊಂದಿಗೆ ಜನತಾದಳ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಹಾಗೂ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ತಿಳಿಸಿದರು.
ಕಾರ್ಯಕ್ರಮ ಹಿನ್ನೆಲೆ ಜು.15 ಮತ್ತು 16ರಂದು ಜಿಲ್ಲೆಗೆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆ ಶನಿವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಜು.15ರಂದು ದೇವರ ಹಿಪ್ಪರಗಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮರು ದಿನ ಬಸವನ ಬಾಗೇವಾಡಿ ಹಾಗೂ ಇಂಡಿ ಮತಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎಂದರು.
ಈ ಹಿಂದೆ ಜೆಡಿಎಸ್ ಸರ್ಕಾರದಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಆಲಮಟ್ಟಿಗೆ ಅನುದಾನ ನೀಡಿ, ಅದನ್ನು ಸಾಕಾರಗೊಳಿಸಿದ್ದರು. ಅಲ್ಲದೇ, ಜಿಲ್ಲೆಯ ಇತರ ನೀರಾವರಿ ಯೋಜನೆಗಳಿಗೂ ಜೆಡಿಎಸ್ ಕೊಡುಗೆ ನೀಡಿದೆ. ಪಕ್ಷ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್ ಗಟ್ಟಿಯಾಗಿತ್ತು. ಈ ಮೊದಲು ಒಬ್ಬ ಶಾಸಕರಿದ್ದರು. ಈಗ ಸಹ ಒಬ್ಬರನ್ನು ಜನತೆ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಬಹುದು. ಪಕ್ಷಕ್ಕೆ ಜನರು ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಮಂಕಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖಂಡರು, ಇಷ್ಟು ದಿನ ಹೋರಾಟದಲ್ಲಿ ಕೊಂಚ ಹಿಂದೆ ಬಿದ್ದಿರುವುದು ನಿಜ. ಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಾಗೂ ಪಕ್ಷದ ಸಂಘಟನೆಗೆ ಮತ್ತಷ್ಟು ಒತ್ತು ನೀಡಲಾಗುವುದು ಎಂದರಲ್ಲದೇ ಆಲಮಟ್ಟಿ ಜಲಾಶಯ ಎತ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಪಕ್ಷದ ಪ್ರಮುಖರಾದ ಸುನೀತಾ ಚವಾಣ್, ಅಪ್ಪುಗೌಡ ಪಾಟೀಲ, ಎಚ್.ಎಸ್. ಮೊಕಾಶಿ, ರಾಜು ಹಿಪ್ಪರಗಿ, ನಿಂಗನಗೌಡ ಸೊಲ್ಲಾಪುರ ಇದ್ದರು.