

ಬ್ಯಾಡಗಿ: ಸಮಾಜ ಪರಿವರ್ತನೆಯಲ್ಲಿ ಜನಪದ ಸಾಹಿತ್ಯ ಹಾಗೂ ಮಾಧ್ಯಮಗಳ ಪಾತ್ರ ಹಿರಿದಾಗಿದ್ದು, ಪ್ರಸಕ್ತ ಡಿಜಿಟಲ್ ವ್ಯವಸ್ಥೆ ಇನ್ನಷ್ಟು ವೇಗ ನೀಡಿದೆ ಎಂದು ಸಾಹಿತಿ ಮಾಲತೇಶ ಚಳಗೇರಿ ತಿಳಿಸಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಜರುಗಿದ ತಾಲೂಕು 7ನೇ ಕಸಾಪ ಸಮ್ಮೇಳನದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀಲ ಕಾಲದಿಂದಲೂ ಜನಪದ ಸಾಹಿತ್ಯ ಹಾಗೂ ಹಾಡುಗಳು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವಲ್ಲಿ ಮುಖ್ಯವಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ವೇಳೆ ಮುದ್ರಿತ ಮಾಧ್ಯಮಗಳ ಪ್ರಭಾವವಾಗಿ ಹೋರಾಟಕ್ಕೆ ಸಹಕಾರಿಯಾಗುವ ಮೂಲಕ ಜನರಲ್ಲಿ ಹೆಚ್ಚು ಜಾಗೃತಿ ಮುಟ್ಟಿಸಿದ್ದವು. ಬಳಿಕ ಟಿವಿ ಮಾಧ್ಯಮ ಹಂತಹಂತವಾಗಿ ವೇಗ ಪಡೆದುಕೊಂಡು ಈಗ ಫೇಸ್ಬುಕ್ ಹಾಗೂ ಇತರೆ ಡಿಜಿಟಲ್ ಮಾಧ್ಯಮಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ ಎಂದರು.
ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳಲು ಜನಪದ ಹಾಡುಗಳು ಅವನ ಹುಟ್ಟಿನಿಂದ ಸಾಯುವವರೆಗೂ ಪ್ರೇರಣಾತ್ಮಕವಾಗಿದ್ದು, ಕಣ್ಮರೆಯಾಗುತ್ತಿರುವ ಜನಪದ ಹಾಡುಗಳನ್ನು ಜನಪರಗೊಳಿಸುವ ಅಗತ್ಯವಿದೆ. ಹೆಣ್ಣುಮಕ್ಕಳು ತಮ್ಮ ವಿಶಾಲ ಮತ್ತು ವೈವಿಧ್ಯಮಯ ಜೀವನ ಶೈಲಿಯನ್ನು ರೂಢಿಸಿಕೊಂಡಾಗ ಸಾಮಾಜಿಕ ಬದಲಾವಣೆ ಸಾಧ್ಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಫೀರೋಜಷಾ ಸೋಮನಕಟ್ಟಿ ಬದುಕಿಗೆ ಜನಪದ ಹಾಡುಗಳ ಪ್ರೇರಣೆ, ಪರ್ತಕರ್ತೆ ಸಬಾ ಹಕೀಮ್ ಸಾಮಾಜಿಕ ಬದಲಾವಣೆಯಲ್ಲಿ ಮಾಧ್ಯಮಗಳ ಪಾತ್ರ, ಕವಯಿತ್ರಿ ಶಕುಂತಲಾ ದಾಳೇರ ‘ಮಹಿಳೆಯರು ಎದುರಿಸುತ್ತಿರುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.
ಸಮ್ಮೇಳನ ಸರ್ವಾಧ್ಯಕ್ಷ ಜೀವರಾಜ ಛತ್ರದ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ವರ್ತಕರಾದ ಚಂದ್ರಣ್ಣ ಆಲದಗೇರಿ, ಬಸವರಾಜ ಕಡೆಕೊಪ್ಪ, ಮೋಹನ ಬಿನ್ನಾಳ, ಆರ್.ಜೆ. ಹಾಲೇವಾಡಿಮಠ, ವೀರೇಂದ್ರ ಶೆಟ್ಟರ, ಮಾಲತೇಶ ಅರಳೀಮಟ್ಟಿ, ಪರಶುರಾಮ ಉಜನಿಕೊಪ್ಪ, ಜಿ.ಬಿ. ಬೂದಿಹಾಳ, ಮಹದೇವ ಕರಿಯಣ್ಣನವರ, ಮಲ್ಲಪ್ಪ ಕರೆಣ್ಣನವರ, ಪ್ರಕಾಶ ಛತ್ರದ, ಮಂಗಳಾ ಕೆಂಬಿ, ಗಿರೀಶ ಇಂಡಿಮಠ, ಅಶ್ವಿನಿ ಬಿದರಿ, ಇತರರಿದ್ದರು. ಶಿಕ್ಷಕರಾದ ಫಕೀರೇಶ ಲಮಾಣಿ, ಎಂ.ವೈ. ಸಾಳುಂಕೆ, ವಿ.ವಿ. ಮಾತನವರ ಕಾರ್ಯಕ್ರಮ ನಿರ್ವಹಿಸಿದರು.