ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್: ಅಂಚೆ ಇಲಾಖೆಯ ಐಪಿಪಿಬಿಯಿಂದ ಸೇವೆ

Speed post
Published on

ಮಂಡ್ಯ: ಕೇಂದ್ರ ಮತ್ತು ರಾಜ್ಯಸರ್ಕಾರದ ನಿವೃತ್ತ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ನೀಡಬೇಕಾದ ಜೀವನ ಪ್ರಮಾಣ ಪತ್ರವನ್ನು ಸುಲಭ ವಿಧಾನದಲ್ಲಿ ನೀಡುವ ಸೇವೆಯನ್ನು ಅಂಚೆ ಇಲಾಖೆ ಒದಗಿಸುತ್ತಿದೆ.

ಈ ಸಂಬಂಧ ಸರ್ಕಾರ ಖಜಾನೆ ಇಲಾಖೆಯಿಂದ ಅಂಚೆ ಇಲಾಖೆಯ ಇಂಡಿಯಾ ಫೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್(ಡಿಎಲ್‌ಸಿ) ಅನ್ನು ಫಲಾನುಭವಿಗಳ ಮನೆ ಬಾಗಿಲಿಗೆ ನೀಡುವ ವ್ಯವಸ್ಥೆ ಮಾಡುತ್ತಿದೆ. ಇದರಿಂದಾಗಿ ಹಲವರಿಗೆ ದೊಡ್ಡಮಟ್ಟದಲ್ಲಿಯೇ ಅನುಕೂಲವಾಗಲಿದೆ.

ಏನಿದು ಡಿಎಲ್‌ಸಿ?: ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ತಾವು ಬದುಕಿರುವ ಸಂಬಂಧ ಪ್ರತಿ ವರ್ಷ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇದರಿಂದಾಗಿ ಪಿಂಚಣಿ ಹಣ ಬರಲಿದೆ. ಇದಕ್ಕಾಗಿ ಫೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ಗಳಿಗೆ ಹೋಗಿ ಬಯೋಮೆಟ್ರಿಕ್ ಹಾಗೂ ಕಣ್ಣಿನ ಆಧಾರ ನೀಡಬೇಕಿತ್ತು. ಆದರೆ ಕೆಲ ವೃದ್ಧರಿಗೆ ಇದು ಸಮಸ್ಯೆಯಾಗಿತ್ತು. ಪ್ರಮಾಣ ಪತ್ರ ಪಡೆಯಲು ಕಾಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯೇ ನಿವೃತ್ತ ನೌಕರರು ಇರುವಲ್ಲಿಗೆ ತೆರಳಿ ಡಿಎಲ್‌ಸಿ ನೀಡಲಿದೆ. ಜಿಲ್ಲೆಯಲ್ಲಿರುವ 347 ಅಂಚೆ ಕಚೇರಿಗಳಲ್ಲಿಯೂ ಈ ಸೇವೆ ಲಭ್ಯವಿದೆ. ಅವಶ್ಯಕತೆ ಇರುವವರು 70 ರೂ ಪಾವತಿಸಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ, ಮಾಶಾಸನದ ಸಂಖ್ಯೆ, ಪಿಂಚಣಿದಾರರ ಬ್ಯಾಂಕ್ ಖಾತೆ ವಿವರ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಜಿಲ್ಲೆಯಲ್ಲಿ ಸುಮಾರು 38 ಸಾವಿರ ನಿವೃತ್ತ ನೌಕರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net