

ಉಡುಪಿ: ಜಿಲ್ಲೆಗೆ ಮಾದರಿಯಾದ ಕೇಂದ್ರ ಗ್ರಂಥಾಲಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕು. ಡಿಜಿಟಲ್ ಗ್ರಂಥಾಲಯ ಕಾರ್ಯಾಗಾರ ಮೂಲಕ ಇ-ಗ್ರಂಥಾಲಯದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರ ಸಭೆ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಹೇಳಿದರು.
ಶನಿವಾರ ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕಿ ರೀನಾ ಎಸ್. ಹೆಗ್ಡೆ ಮಾತನಾಡಿ, ಗ್ರಂಥಾಲಯವು ಜ್ಞಾನ ದೇಗುಲ ಮಾತ್ರವಲ್ಲ, ಮನುಷ್ಯನ ಮನಸ್ಸನ್ನು ಸದೃಢಮಾಡುವ ಭಂಡಾರವಿದ್ದಂತೆ. ಮನಸ್ಸನ್ನು ಸಧೃಡ ಮಾಡಿಕೊಂಡಲ್ಲಿ ನಾವು ಜೀವನದ ಗುರಿ ತಲುಪಲು ಸಾಧ್ಯ. ನೂರು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ ಪುಸ್ತಕ ಎಂಬ ಒಬ್ಬ ಸ್ನೇಹಿತನನ್ನು ಸಂಪಾದಿಸಿದರೆ ಉತ್ತಮ ಜೀವನವನ್ನು ರೂಪಿಸಬಹುದು ಎಂದರು.
ಮಲಬಾರ್ ಗೋಲ್ಡ್ನ ವ್ಯವಸ್ಥಾಪಕರಾದ ರಾಘವೇಂದ್ರ ನಾಯಕ್ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಗಿರಿಜಾ ಹೆಗ್ಡೆ ಗಾಂವ್ಕರ್ ಮಾತನಾಡಿದರು. ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾರಾ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ವಿಜೇತ ಇವರು ತಮ್ಮಲ್ಲಿ ಸಂಗ್ರಹವಿರುವ ಕೆಲವೊಂದು ಪುಸ್ತಕಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ನಗರ ಕೇಂದ್ರ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಶಿಕ್ಷಣ ಪೌಂಡೇಶನ್ನ ಕುಂದಾಪುರ ತಾಲೂಕಿನ ಸಂಯೋಜಕಿ ನಮಿತಾ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಉಪಸ್ಥಿತರಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ . ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಗ್ರಂಥಪಾಲಕಿ ರಂಜಿತ ಸಿ., ಡಿಜಿಟಲ್ ಗ್ರಂಥಾಲಯದ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ಪ್ರಾರ್ಥಿಸಿ ವಂದಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ನಿರೂಪಿಸಿದರು.