

ಮೇಲುಕೋಟೆ: ಮೇಲುಕೋಟೆ ಕ್ಷೇತ್ರದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬೆಂಗಳೂರಿನ ವಕೀಲ ಹಾಗೂ ಸಮಾಜಸೇವಕ ಅರವಿಂದ ರಾಘವನ್ ಗಮನಾರ್ಹ ಸೇವೆ ಮಾಡುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಣಬದಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಾಲ ಭೈರವೇಶ್ವರ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅರವಿಂದ ರಾಘವನ್ ಅವರು 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ರಾಘವನ್ ಅವರು ಮೇಲುಕೋಟೆ ಹೋಬಳಿಯನ್ನು ಕೇಂದ್ರವಾಗಿರಿಸಿಕೊಂಡು 2 ದಶಕಗಳಿಂದ ಹಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಲಕ್ಷಾಂತ ರೂ. ನೆರವು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಆಧುನಿಕ ತಂತ್ರಜ್ಞಾನ ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಪೂರಕವಾಗಿದ್ದು, ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭವಾಗಬೇಕು. ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ರಾಘವನ್ ಕೊಡುಗೆ ಮಾದರಿ ಆಗಬೇಕು ಎಂದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಮೇಲುಕೋಟೆ ಕ್ಷೇತ್ರದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅರವಿಂದ ರಾಘವನ್ ಅಪಾರ ಕೊಡುಗೆ ನೀಡುತ್ತಿದ್ದಾರೆ. ಇವರ ಸೇವೆ ಹೀಗೆಯೆ ಮುಂದುವರಿಯಬೇಕು ಮಕ್ಕಳಿಗೆ ಕ್ರೀಡಾಸಮವಸ್ತ್ರ, ಕೊಠಡಿಗಳ ನಿರ್ಮಾಣ, ಗ್ರಂಥಾಲಯ ನಿರ್ಮಾಣ ನೆಲಗಳಿಗೆ ಟೈಲ್ಸ್ ಅಳವಡಿಕೆ, ಬಣ್ಣಹೊಡೆಸಲು ಸಹಕಾರ ಶೈಕ್ಷಣಿಕ ಪ್ರವಾಸಕ್ಕೆ ಕೊಡುಗೆ ಹೀಗೆ ಹಲವು ರೀತಿ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ಇದು ಮುಂದುವರಿಯಲಿ ಎಂದರು.
ಸಮಾರಂಭದಲ್ಲಿ ಅರವಿಂದ ರಾಘವನ್ ಮಾತನಾಡಿ, ನನಗೆ ಹಿಂದಿನಿಂದಲೂ ಸರ್ಕಾರಿ ಶಾಲೆಗಳ ಪ್ರೋತ್ಸಾಹಕ್ಕೆ ಕೈಲಾದ ಸಹಕಾರ ನೀಡಬೇಕೆಂಬ ಬಯಕೆಯಿದೆ. ಈ ಕಾರಣಕ್ಕೆ ಮೇಲುಕೋಟೆ ಸುತ್ತಮುತ್ತಲ ಕ್ರಿಯಾತ್ಮಕ ಶಿಕ್ಷಕರಿರುವ ಶಾಲೆಗಳಿಗೆ ಪ್ರತಿ ವರ್ಷ ನೆರವು ನೀಡುತ್ತಿದ್ದೇನೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಸಹಕಾರ ನೀಡುತ್ತಿದ್ದಾರೆ ಎಂದರು.
ಲೆಕ್ಕಪರಿಶೋಧಕ ಅಶೋಕ್ ರಾಘವನ್, ರಶ್ಮಿ ಅಶೋಕ್, ಆಕಾಶ್ ಅಶೋಕ್, ವೀರೇಶ್ ಸರ್ವೆಯರ್ ಶಂಕರ್, ಗ್ರಾಪಂ ಸದಸ್ಯೆ ಉಮಾರಾಜೇಗೌಡ, ಗ್ರಾಪಂ ಸದಸ್ಯ ನರಸಿಂಹೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣೇಗೌಡ, ಮುಖ್ಯಶಿಕ್ಷಕ ಎಂ.ಎಸ್.ಜಯಚಂದ್ರನ್, ಸಹಶಿಕ್ಷಕ ಮಹದೇವಪ್ಪ, ಇಸಿಒ ಶ್ರೀನಿವಾಸ್ ರಮೇಶ್, ಗ್ರಾಮದ ಮುಖಂಡ ಎಸ್.ಜೆ ರಾಮು, ಅಂಗಡಿಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಪುಟ್ಟಮ್ಮ ಲೋಕೇಶ್ ಮತ್ತಿತರರಿದ್ದರು.