ಡಿಸಿಸಿ ಬ್ಯಾಂಕ್‌ನಲ್ಲಿ ಡಿಜಿಟಲ್ ಮಾಹಿತಿ ಫಲಕ ಅನಾವರಣ

30adarshkdga6
Published on

ಮಡಿಕೇರಿ: ನಗರದಲ್ಲಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಬ್ಯಾಂಕ್‌ನ ಸಮಗ್ರ ಸೌಲಭ್ಯಗಳ ಮಾಹಿತಿ ಒಳಗೊಂಡ ’ಡಿಜಿಟಲ್ ಮಾಹಿತಿ ಪ್ರಚಾರ’ ಫಲಕಕ್ಕೆ ಚಾಲನೆ ನೀಡಲಾಯಿತು.


ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಡಿಜಿಟಲ್ ಪ್ರಚಾರ ಫಲಕವನ್ನು ಉದ್ಘಾಟಿಸಿ ಮಾತನಾಡಿ, ಮಡಿಕೇರಿಯಲ್ಲಿರುವ ಕೇಂದ್ರ ಬ್ಯಾಂಕ್‌ನಲ್ಲಿ ಕೇಂದ್ರೀಕೃತಗೊಂಡಿರುವ ಡಿಜಿಟಲ್ ವ್ಯವಸ್ಥೆಯ ಮಾಹಿತಿಯು ಜಿಲ್ಲೆಯಾದ್ಯಂತ ಡಿಸಿಸಿ ಬ್ಯಾಂಕ್‌ಗಳ ೨೨ ಶಾಖೆಗಳಲ್ಲಿಯೂ ಟಿವಿ ಪರದೆಯ ಮೂಲಕ ಕಾಣಲಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸುಲಭವಾಗಿ ಬ್ಯಾಂಕ್‌ನಿಂದ ದೊರಕುವ ಸಾಲ ಸೌಲಭ್ಯಗಳು, ಠೇವಣಿ ಬಡ್ಡಿದರಗಳು, ವಿವಿಧ ರೀತಿಯ ಸೌಲಭ್ಯಗಳ ಸಮಗ್ರ ಮಾಹಿತಿ ದೊರಕುವುದು ಸುಲಭ ಸಾಧ್ಯವಾಗಲಿದೆ ಎಂದರು.


೧೯ ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ತಂತ್ರಜ್ಞಾನದ ಮಾಹಿತಿ ಫಲಕ ಅಳವಡಿಸಿದ್ದೇವೆ. ಅಂತೆಯೇ ರಾತ್ರಿಯಲ್ಲಿಯೂ ಜನರ ಗಮನ ಸೆಳೆಯುವ ಡಿಜಿಟಲ್ ಫಲಕವನ್ನೂ ೧.೬೦ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿರುವ ೨೩ ರಾಷ್ಟ್ರಿಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ೧೭೪ ಶಾಖೆಗಳ ಪೈಕಿ ಕೆಡಿಸಿಸಿ ಬ್ಯಾಂಕ್ ತನ್ನ ಗ್ರಾಹಕ ಸ್ನೇಹಿ ಯೋಜನೆಗಳು, ನಿರಖು ಠೇವಣಿ ಮತ್ತು ಸಾಲ ವಿತರಣೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಗ್ಗಳಿಕೆಯಾಗಿದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಡಿಸಿಸಿ ಬ್ಯಾಂಕ್ ಪ್ರಬಲ ಸ್ಪರ್ಧೆ ನೀಡುತ್ತಿದ್ದು, ಸದಾ ಗ್ರಾಹಕರ ಒಳಿತನ್ನು ಕೆಡಿಸಿಸಿ ಬ್ಯಾಂಕ್ ಬಯಸುತ್ತಾ ಬಂದಿದೆ ಎಂದು ವಿವರಿಸಿದರು.


ಕೊಡಗು ಡಿಸಿಸಿ ಬ್ಯಾಂಕ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸುವುದು, ಸಾಲ ಮರುಪಾವತಿ ಸೇರಿದಂತೆ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.


೧೦೧ ವರ್ಷಗಳನ್ನು ಪೂರೈಸಿರುವ ಕೊಡಗು ಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಕಟ್ಟಡ ಕಾಮಗಾರಿ ಇದೇ ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದ್ದು, ಬ್ಯಾಂಕ್‌ನ ಗ್ರಾಹಕರಿಗೆ ವಿಶಾಲವಾದ ಕಟ್ಟಡದಲ್ಲಿ ಮತ್ತಷ್ಟು ಸೌಲಭ್ಯಗಳು ಸುಲಭವಾಗಿ ದೊರಕಲಿದೆ ಎಂದು ಬಾಂಡ್ ಗಣಪತಿ ವಿವರಿಸಿದರು.


ಕೆಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕ ಬಿ.ಡಿ.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಎಲ್ಲಾ ರಂಗಗಳು ನಾಗಾಲೋಟದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವಾಗ ಕೆಡಿಸಿಸಿ ಬ್ಯಾಂಕ್ ಕೂಡ ಇದೀಗ ಗ್ರಾಹಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಸಮಗ್ರ ಮಾಹಿತಿ ನೀಡಲು ಮುಂದಾಗಿದೆ. ಪ್ರತೀ ಬ್ಯಾಂಕ್‌ಗಳು ವಿವಿಧ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಸಂದರ್ಭ ಕೆಡಿಸಿಸಿ ಬ್ಯಾಂಕ್ ಅತ್ಯಾಧುನಿಕವಾದ ಡಿಜಿಟಲ್ ಮಾಹಿತಿ ಫಲಕದೊಂದಿಗೆ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್.ಹರೀಶ್ ಪೂವಯ್ಯ, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎಸ್.ಬಿ.ಭರತ್‌ಕುಮಾರ್, ಹೊಟ್ಟೇಂಗಡ ಎಂ.ರಮೇಶ್, ಪಟ್ರಪಂಡ ಬಿ.ರಘುನಾಣಯ್ಯ, ಹೊಸೂರು ಜೆ.ಸತೀಶ್ ಕುಮಾರ್, ಕನ್ನಂಡ ಎ.ಸಂಪತ್, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್.ಕೃಷ್ಣಪ್ರಸಾದ್, ಪ್ರಧಾನ ವ್ಯವಸ್ಥಾಪಕಿ ಎ.ಎಸ್.ಪಾರ್ವತಿ, ಉಪ ಪ್ರಧಾನ ವ್ಯವಸ್ಥಾಪಕ ಕೆ.ಕೆ.ಗೋವಿಂದರಾಜು, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net