ಎಸ್‌ಎಚ್‌ಜಿ ಸದಸ್ಯರಿಗೆ ಸಾಮಾಜಿಕ ಭದ್ರತಾ ಯೋಜನೆ

CTD ZP TURUVNURU---
Published on

ಚಿತ್ರದುರ್ಗ: ಸ್ವ ಸಹಾಯ ಗುಂಪು(ಎಸ್‌ಎಚ್‌ಜಿ)ಸದಸ್ಯರನ್ನು ಸಾಮಾಜಿಕ ವಿಮಾ ಯೋಜನಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯಡಿ ತರಬೇಕೆಂದು ಜಿಪಂ ಯೋಜನಾ ನಿರ್ದೇಶಕಿ ಸಿ.ಎಸ್. ಗಾಯತ್ರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಹಾಗೂ ಚಿತ್ರದುರ್ಗ ತಾಲೂಕು ತುರುವನೂರು ಕೆನರಾ ಬ್ಯಾಂಕ್ ಶಾಖೆ ಸಹಯೋಗದಲ್ಲಿ ಗ್ರಾಮದ ರಾಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ 3 ತಿಂಗಳ ಸಾಮಾಜಿಕ ಭದ್ರತಾ ಯೋಜನೆಗಳ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿಸುವುದರ ಜತೆಗೆ, ಪ್ರತಿ ಕುಟುಂಬದ ಸದಸ್ಯರು ಸಾಮಾಜಿಕ ಭದ್ರತಾ ಯೋಜನೆ ಲಾಭ ಪಡೆಯುವಂತೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸಬೇಕು. ಇದರೊಂದಿಗೆ ಜಿಪಂ ಎನ್‌ಆರ್‌ಎಲ್‌ಎಂ ಸಂಯೋಜಕರು ಸ್ವ ಸಹಾಯ ಗುಂಪುಗಳ ಸದಸ್ಯರ ಕುಟುಂಬದವರನ್ನು ಸಹ ಸಾಮಾಜಿಕ ವಿಮಾ ಯೋಜನೆಯಡಿ ನೊಂದಣಿ ಮಾಡಲು ಜಾಗೃತಿ ಮೂಡಿಸಬೇಕು ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಒಳಗೊಳ್ಳುವಿಕೆ ಮಟ್ಟ ಹೆಚ್ಚಿಸಿ, ಸಾಮಾಜಿಕ ಭದ್ರತೆ ಹಾಗೂ ವಿಮಾ ಯೋಜನೆಗಳನ್ನು ಜನರಿಗೆ ತಲುಪಿಸಲು ಜು.1ರಿಂದ ಸೆಪ್ಟೆಂಬರ್30 ರವರೆಗೆ 3 ತಿಂಗಳ ಕಾಲ ಜಿಲ್ಲೆಯ 189 ಗ್ರಾಪಂಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಿಡಿಒ, ಬ್ಯಾಂಕ್ ಅಧಿಕಾರಿಗಳು ಸಾಮಾಜಿಕ ವಿಮಾ ಯೋಜನೆಗಳ ನೊಂದಣಿಗೆ ಹೆಚ್ಚಿನ ಶ್ರಮವಹಿಸಬೇಕು ಎಂದು ತಿಳಿಸಿದರು.

3 ತಿಂಗಳ ಈ ಅಭಿಯಾನದಲ್ಲಿ ಜನಧನ್ ಯೋಜನೆಯಡಿ ಹೊಸ ಬ್ಯಾಂಕ್ ಖಾತೆ ತೆರೆಯಲಾಗುವುದು. ಹಳೆಯ ಬ್ಯಾಂಕ್ ಖಾತೆಗಳ ಇ-ಕೆವೈಸಿ ಮಾಡಲಾಗುವುದು. ಸಾಮಾಜಿಕ ವಿಮಾ ಯೋಜನೆಗಳು ಹಾಗೂ ಬ್ಯಾಂಕ್‌ಗಳ ಹೆಸರಲ್ಲಿ ಎಸಗುವ ಡಿಜಿಟಲ್ ವಂಚನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ರಾಘವೇಂದ್ರ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ನಾಗರತ್ನ, ಪಿಡಿಒ ಖಲೀಮ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕೆ.ಒ. ಕುಶಾಲ್‌ಕುಮಾರ್, ಎನ್‌ಆರ್‌ಎಲ್‌ಎಂ ಅನುಷ್ಠಾನಾಧಿಕಾರಿ ಯೋಗೀಶ್, ರುಡ್‌ಸೆಟ್ ಸಂಪನ್ಮೂಲ ವ್ಯಕ್ತಿ ಉದಯ್ ಕುಮಾರ್, ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net