

ಮಂಜುನಾಥ ತಿಮ್ಮಯ್ಯ ಮೈಸೂರು
ರಾಜ್ಯದ ವಸ್ತುಸಂಗ್ರಹಾಲಯಗಳಲ್ಲಿರುವ ಬರೋಬ್ಬರಿ 60 ಸಾವಿರ ಕಲಾಕೃತಿಗಳನ್ನು ಲೇಸರ್ ಸ್ಕಾೃನಿಂಗ್ ಮೂಲಕ 3ಡಿ ದತ್ತಾಂಶ ಸಂಗ್ರಹಕ್ಕೆ ಕ್ರಮವಹಿಸಲಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಕಲಾಕೃತಿಗಳನ್ನು ಸೆರೆ ಹಿಡಿದು ದಾಖಲೀಕರಣ ಮಾಡಲಾಗುತ್ತದೆ.
ರಾಜ್ಯದ 16 ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಈ ಕಲಾಕೃತಿಗಳನ್ನು ಡಿಜಿಟಲ್ ಮಾಡಲು ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಶೀಘ್ರದಲ್ಲೇ 3ಡಿ ಲೇಸರ್ ಸ್ಕ್ಯಾನಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಪುರಾತತ್ವ ಇಲಾಖೆಯು ಒಡಂಬಡಿಕೆ ಮಾಡಿಕೊಂಡಿದ್ದು, ಈ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯುವ ನಿರೀಕ್ಷೆ ಇದೆ.
ಇಲಾಖೆಯ ವ್ಯಾಪ್ತಿಯಲ್ಲಿ ಬರುವ 16 ವಸ್ತುಸಂಗ್ರಹಾಲಯಗಳು ಮತ್ತು ಒಂದು ಆರ್ಟ್ ಗ್ಯಾಲರಿಯಲ್ಲಿ ಶಿಲ್ಪಗಳು, ಮಡಕೆಗಳು, ಟೆರ‌್ರಕೋಟಾಗಳು, ಲೋಹದ ವಸ್ತುಗಳು, ಕಲ್ಲಿನ ವಸ್ತುಗಳು, ಗಾಜಿನ ವಸ್ತುಗಳು, ಮರದ ವಸ್ತುಗಳು, ದಂತ ಮತ್ತು ಮೂಳೆ ವಸ್ತುಗಳು, ಮಣಿಗಳು ಸೇರಿದಂತೆ 60 ಸಾವಿರ ಕಲಾಕೃತಿಗಳು, ಪ್ರಾಚೀನ ವಸ್ತುಗಳೂ ಇವೆ.
ಮುದ್ರೆಗಳು, ಶಾಸನಗಳು ಮತ್ತು ವರ್ಣಚಿತ್ರಗಳೂ ಸೇರಿದಂತೆ ಪುರಾತನ ಕುರುಹುಗಳ ಭಂಡಾರವೇ ಇಲ್ಲಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಈಗಾಗಲೇ 3ಡಿ ಲೇಸರ್ ಸ್ಕ್ಯಾನಿಂಗ್ ಮೂಲಕ 844 ಸ್ಮಾರಕಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಡಿಸೆಂಬರ್ 2023ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿದೆ. ಅದರ ಮುಂದುವರಿದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಬೆಂಗಳೂರು ಮ್ಯೂಸಿಯಂ ಮತ್ತು ವೆಂಕಟಪ್ಪ ಚಿತ್ರಕಲಾ ಶಾಲೆಯಲ್ಲಿ ಅತ್ಯಧಿಕ 12,000 ಪುರಾತನ ವಸ್ತುಗಳಿವೆ. ನಂತರ ಮಂಗಳೂರಿನಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯವು 4,935 ಕಲಾಕೃತಿಗಳನ್ನು ಹೊಂದಿದೆ. ಇದರಲ್ಲಿ ಅತ್ಯಧಿಕ 2,435 ನಾಣ್ಯಗಳು ಮತ್ತು 1,234 ಪುರಾತತ್ವ ಅವಶೇಷಗಳು ಇಲ್ಲಿವೆ.
ಶಿವಮೊಗ್ಗದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ 385 ಶಾಸನಗಳು, 477 ನಾಣ್ಯಗಳು, 100 ಹಸ್ತಪ್ರತಿಗಳು, 61 ವರ್ಣಚಿತ್ರಗಳನ್ನು ಒಳಗೊಂಡಿರುವ 1486 ಕಲಾಕೃತಿಗಳಿವೆ. ಮೈಸೂರಿನ ಸರ್ಕಾರಿ ಕಲಾ ಗ್ಯಾಲರಿಯಲ್ಲಿ (ವೆಲ್ಲಿಂಗ್ಟನ್ ಭವನ) 47 ಶಾಸನಗಳು, 275 ವರ್ಣಚಿತ್ರಗಳು ಸೇರಿದಂತೆ 525 ಕಲಾಕೃತಿಗಳ ಖಜಾನೆ ಇದೆ. ಚರಿತ್ರೆ ಸಾರುವ ಈ ಕಲಾಕೃತಿಗಳನ್ನು ಡಿಜಿಟಲೀಕರಣಗೊಳಿಸಿ ದಾಖಲೀಕರಣಗೊಳಿಸಲು ಪುರಾತತ್ವ ಇಲಾಖೆ ಇದೀಗ ಕ್ರಿಯಾಶೀಲವಾಗಿದೆ.
ಮೈಸೂರು ಅರಮನೆಯ ಸ್ಟ್ರಾಂಗ್‌ರೂಂನಲ್ಲಿ ಅನೇಕ ಪುರಾತನ ವಸ್ತುಗಳು ದೊಡ್ಡ ಸಂಖ್ಯೆಯಲ್ಲಿವೆ. ಇಲ್ಲಿರುವ ಐತಿಹಾಸಿಕ ವಸ್ತುಗಳ 3ಡಿ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಕಾಮಗಾರಿಗೂ ಅನುಮತಿ ಪಡೆದುಕೊಳ್ಳಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಲಾಗಿದೆ.
ರಾಜ್ಯದ 16 ವಸ್ತುಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಯಲ್ಲಿ ಪ್ರಾಚೀನ ವಸ್ತುಗಳ ಡಿಜಿಟಲೀಕರಣ ಈಗಾಗಲೇ ಶುರುವಾಗಬೇಕಿತ್ತು. ಆದರೀಗ ಲೋಕಸಭಾ ಚುನಾವಣೆ ಸಮೀಪಿಸಿದೆ. ಇದು ಮುಗಿದ ಬಳಿಕ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು. ಇದಕ್ಕೆ ಬಹಳಷ್ಟು ಸಮಯ ಹಿಡಿಯಲಿದೆ.
ಈ ಕೆಲಸ ಪೂರ್ಣಗೊಂಡ ನಂತರ ಡಿಜಿಟಲ್ ರೂಪದ ಪುರಾತತ್ವ ವಸ್ತುಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಬಳಿಕ ಸಾರ್ವಜನಿಕರ ವೀಕ್ಷಣೆಗೆ, ಸಂಶೋಧನೆ ಚಟುವಟಿಕೆಗಳಿಗೆ ಬಳಕೆಗೆ ಇದು ದೊರೆಯಲಿದೆ ಎಂದು ಇಲಾಖೆ ಆಯುಕ್ತ ಎ.ದೇವರಾಜ್ ತಿಳಿಸಿದ್ದಾರೆ.
3ಡಿ ಸ್ಕ್ಯಾನಿಂಗ್ ಅನ್ನು ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನದೊಂದಿಗೆ 360 ಡಿಗ್ರಿಗಳಲ್ಲಿ ಮಾಡಲಾಗುತ್ತದೆ. ಇದು ಸಂವಾದಾತ್ಮಕವಾಗಿರುತ್ತದೆ. ರಾಜ್ಯದ ಎಲ್ಲ ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗುವ ಕಲಾಕೃತಿಗಳ ಸೂಕ್ಷ್ಮ ವಿವರವನ್ನು ಡಿಜಿಟಲ್ ಪರದೆಗಳ ಮೂಲಕ ಜನರು ತಿಳಿದುಕೊಳ್ಳಬಹುದು.
ಕಾಲಾನಂತರದಲ್ಲಿ ಕಲಾಕೃತಿಗಳ ಸವೆತ, ಮೂಲ ಸ್ವರೂಪವು ಕೊಂಚವಾದರೂ ಮಾಸಬಹುದು. ಆದರೆ, ಡಿಜಿಟಲ್ ದತ್ತಾಂಶದಲ್ಲಿ ದಾಖಲಾದ ಕಲಾಕೃತಿಗಳ ಮೂಲರಚನೆ ಮತ್ತು ವಿನ್ಯಾಸದಲ್ಲೇ ಗ್ರಹಿಸಿಕೊಳ್ಳಬಹುದು. ಇದು ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನ ಮತ್ತು ವಿಶ್ಲೇಷಣೆಗೆ ಸಹಾಯ ಮಾಡುತ್ತದೆ ಎಂದು ಇಲಾಖೆ ಆಯುಕ್ತ ಎ.ದೇವರಾಜ್ ತಿಳಿಸಿದ್ದಾರೆ.
ಅಥಣಿಯ ಸರ್ಕಾರಿ ವಸ್ತುಸಂಗ್ರಹಾಲಯ 75
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ 649
ಗದಗಿನ ಸರ್ಕಾರಿ ವಸ್ತುಸಂಗ್ರಹಾಲಯ 528
ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯ 12000
ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯ 729
ಶಿವಮೊಗ್ಗದ ಸರ್ಕಾರಿ ಮ್ಯೂಸಿಯಂ 1486
ಮಂಗಳೂರಿನ ಶ್ರೀಮಂತಿ ಬಾಯಿ ಸ್ಮಾರಕ ವಸ್ತುಸಂಗ್ರಹಾಲಯ 4935
ಹಾಸನದ ಸರ್ಕಾರಿ ವಸ್ತುಸಂಗ್ರಹಾಲಯ 481
ಮಡಿಕೇರಿಯ ಸರ್ಕಾರಿ ವಸ್ತುಸಂಗ್ರಹಾಲಯ 714
ಶ್ರೀರಂಗಪಟ್ಟಣದ ಚಾಮರಾಜೇಂದ್ರ ಸ್ಮಾರಕ ವಸ್ತುಸಂಗ್ರಹಾಲಯ 282
ಮೈಸೂರಿನ ಸರ್ಕಾರಿ ಮ್ಯೂಸಿಯಂ 525