ರೈತರಿಗೆ ತಾಂತ್ರಿಕತೆ ತಲುಪಿಸಲು ಡಿಜಿಟಲ್ ಸಹಕಾರಿ

gkvk tarabeti
Published on

ಬೆಂಗಳೂರು: ರೈತರಿಗೆ ಕೃಷಿ ತಾಂತ್ರಿಕತೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನ ಹೆಚ್ಚು ನೆರವಿಗೆ ಬರಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಿವಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿಯ ಸಿಬ್ಬಂದಿ ತರಬೇತಿ ಘಟಕ ‘ಸಮೇತಿ’ (ದಕ್ಷಿಣ) ಆಯೋಜಿಸಿದ್ದ 5 ದಿನಗಳ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಪ್ರಸ್ತುತ ಕೃಷಿಕರಿಗೆ ಸಕಾಲದಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ತಲುಪಿಸುವುದು ದೊಡ್ಡ ಸವಾಲಾಗಿದೆ. ಇದಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆ ಹಾಗೂ ತಾಂತ್ರಿಕತೆಯ ಫಲಶೃತಿಯನ್ನು ರೈತರಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಸ್ತಾರ ಯೋಜನೆಗೆ ಕರ್ನಾಟಕವನ್ನು ಆಯ್ಕೆ ಮಾಡಲಾಗಿದೆ. ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲು ವೈಜ್ಞಾನಿಕವಾಗಿ ಜಾಲತಾಣಗಳಲ್ಲಿ ಕಿರು ವಿಡಿಯೋಗಳನ್ನು ಕೃಷಿಯಲ್ಲಿ ಬಳಸಿಕೊಂಡು ಆಯಾ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು ಎಂದರು.

ಆಹಾರ ಉತ್ಪಾದನೆ ಸವಾಲು:

ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಸೂದನ್ ಮಾತನಾಡಿ, ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಸವಾಲಾಗಿ ಪರಿಣಮಿಸಿದೆ. 2030ರ ವೇಳೆಗೆ ಭೂ ಹಿಡುವಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ನೂತನ ತಂತ್ರಜ್ಞಾನವನ್ನು ಕೃಷಿ ಸಂಪನ್ಮೂಲಗಳ ಸಮಗ್ರ ಮಾಹಿತಿಯ ಸಂಯೋಜಿತ ಗಣಕೀಕೃತ ವ್ಯವಸ್ಥೆ (ವಿಸ್ತಾರ) ಯೋಜನೆಯ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿಕೊಳ್ಳುವುದು ಸೂಕ್ತ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಎಸ್.ಎನ್.ಮಂಜುನಾಥ್, ವಿವಿಯ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ. ಕೆ.ಶಿವರಾಮು, ತರಬೇತಿದಾರರಾದ ಡಾ. ಬಿ.ಎನ್.ಅಂಬರೀಷ್ ಹಾಗೂ ಕುಮುದಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net