

ಪ್ರಕಾಶ್ ಮಂಜೇಶ್ವರ, ಮಂಗಳೂರು
ಖಾಸಗಿ ಬಸ್ ಸೇವೆಯಲ್ಲಿ ಉತ್ತಮ ಮಾದರಿ ರೂಪಿಸುವ ಮೂಲಕ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಆರಂಭಿಸುವ ಮೂಲಕ ಇನ್ನೊಂದು ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ದಕ್ಷಿಣ ಕನ್ನಡ ಸಿಟಿ ಬಸ್ ಮಾಲೀಕರ ಸಂಘ ಚಲೋ ಕಂಪನಿ ಸಹಭಾಗಿತ್ವದಲ್ಲಿ ಮುಂದಿನ ವಾರದಲ್ಲೇ ಸ್ಟೇಟ್ಬ್ಯಾಂಕ್- ಮಂಗಳಾದೇವಿ ರೂಟ್ ನಂಬರ್ 27ರಲ್ಲಿ ಸಂಚರಿಸುವ ಐದು ಬಸ್ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ.
ಪ್ರಸ್ತುತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಆಗಸ್ಟ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಗಳಲ್ಲೂ ಆನ್ಲೈನ್ ಬಸ್ ಟಿಕೆಟ್ ವ್ಯವಸ್ಥೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ಡಿಜಿಟಲ್ ವ್ಯವಸ್ಥೆಯಲ್ಲಿ ಟಿಕೆಟ್ ವಿತರಿಸಲು ಅವಶ್ಯ ಇಲೆಕ್ಟ್ರಾನಿಕ್ಸ್ ಟಿಕೆಟ್ ಮೆಶಿನ್ಗಳನ್ನು (ಇಟಿಎಂ) ಈಗಾಗಲೇ ಖರೀದಿಸಲಾಗಿದ್ದು, ಹೊಸ ವ್ಯವಸ್ಥೆಗೆ ಸಿದ್ಧಗೊಳ್ಳಲು ಸಂಬಂಧಿಸಿದ ಎಲ್ಲ ವಿಭಾಗಗಳಿಗೆ ನಿರ್ದೇಶನ ನೀಡಲಾಗಿದೆ. ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಗದು ರಹಿತ ಸೇವೆ ತಯಾರಿ ಕೊನೆಯ ಹಂತದಲ್ಲಿದೆ. ಆಗಸ್ಟ್ನಲ್ಲಿ ಯೋಜನೆ ಜಾರಿಗೊಳ್ಳಬಹುದು ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.
ಏನು ಇದರ ಉಪಯೋಗ?
ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಚಿಲ್ಲರೆ ಕಿರಿಕಿರಿ ಇರುವುದಿಲ್ಲ ಎನ್ನುವುದು ದೊಡ್ಡ ಉಪಯೋಗ. ದೊಡ್ಡ ಮುಖಬೆಲೆಯ ನೋಟುಗಳು ಸಾಚಾವೇ? ಎಂಬುದನ್ನು ದೃಢೀಕರಿಸುವ ಆವಶ್ಯಕತೆಯೂ ಇಲ್ಲ. ಪ್ರಯಾಣಿಕರು ಹೆಚ್ಚು ಹಣ ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ಬಸ್ ನಿರ್ವಾಹಕರ ಕೈಯಲ್ಲಿ ಇರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಹಣ ಪಾವತಿಸಬಹುದು. ಆದರೆ ಈ ವ್ಯವಸ್ಥೆ ಬಳಸಲು ಸ್ಮಾರ್ಟ್ ಫೋನ್ ಹೊಂದಿರಬೇಕು. ಪ್ರಯಾಣಿಕರ ಹಣ ನೇರ ನಿಗಮದ ಖಾತೆಗೆ ಜಮಾ ಆಗುತ್ತದೆ. ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವ ಕಡೆ ಮತ್ತು ಡಿಜಿಟಲ್ ಪಾವತಿ ಬಗ್ಗೆ ತಿಳಿವಳಿಕೆ ಇಲ್ಲದವರಿಗೆ ಹಳೇ ವ್ಯವಸ್ಥೆಯಲ್ಲಿ ಟಿಕೆಟ್ ಪಡೆಯಲು ಅವಕಾಶವೂ ಇದೆ. ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ಸರ್ಕಾರ ನಗದು ರಹಿತ ಆರ್ಥಿಕ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಪರಿಚಯಿಸಿದೆ.
ಮುಂದಿನ ವಾರದಲ್ಲಿ ಮಂಗಳೂರು ನಗರದ ಒಂದು ಮಾರ್ಗದ ಬಸ್ಗಳಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ನಗದು ರಹಿತ ಸೇವೆ ಆರಂಭಿಸಲಾಗುವುದು. ಒಂದು ವಾರ ಹೊಸ ಕೊಡುಗೆಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಹಂತಹಂತವಾಗಿ ಎಲ್ಲ ಮಾರ್ಗಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುವುದು.