ಪೊಲೀಸ್ ಅಧಿಕಾರಿ ಹೆಸರಲ್ಲಿ ಡಿಜಿಟಲ್ ಅರೆಸ್ಟ್ - 61.15 ಲಕ್ಷ ರೂ. ವಂಚನೆಗೊಳಗಾದ ಮಹಿಳೆ

Fruad
Published on

ಮಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಮಹಿಳೆಯನ್ನು ಬೆದರಿಸಿ ಆಕೆಯಿಂದ ಹಂತ ಹಂತವಾಗಿ ಒಟ್ಟು 61.15 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ದಾಖಲಾಗಿದೆ.

ಜೂ.19ರಂದು ಬೆಳಗ್ಗೆ ಮಹಿಳೆಯೋರ್ವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ತಾನು ಮುಂಬೈಯ ಕೊಲಾಬಾ ಪೊಲೀಸ್ ಠಾಣೆಯಿಂದ ತನಿಖಾಧಿಕಾರಿ ಸಂದೀಪ್ ಮಾತನಾಡುತ್ತಿದ್ದು ‘ನಿಮ್ಮ ಗುರುತಿನ ಚೀಟಿ ಬಳಸಿ ಯಾರೋ ಮಾನವ ಕಳ್ಳಸಾಗಣೆ, ಡ್ರಗ್ಸ್ ದಂಧೆ ಮೊದಲಾದ ಅಕ್ರಮ ಚಟುವಟಿಕೆ ನಡೆಸುತ್ತಿದ್ದು ಇದಕ್ಕೆ ಕೆನರಾಬ್ಯಾಂಕ್ ಖಾತೆ ಬಳಸಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸುತ್ತೇವೆ. ನೀವು ಹಣ ನೀಡಬೇಕು. ಈ ವಿಷಯ ಯಾರಿಗೂ ತಿಳಿಸಬಾರದು’ ಎಂದು ಬೆದರಿಸಿದ. ಇದರಿಂದ ಮಹಿಳೆ ಭಯಗೊಂಡಿದ್ದರು. ಅನಂತರ ಅದೇ ದಿನ ಮಧ್ಯಾಹ್ನ ಮತ್ತೊಮ್ಮೆ ಕರೆ ಮಾಡಿದ ವ್ಯಕ್ತಿ ‘ಈ ವಿಷಯವನ್ನು ಪತಿ ಹಾಗೂ ಇತರರಿಗೆ ತಿಳಿಸಿದರೆ ಪತಿಯ ಕೆಲಸ ತೆಗೆಸುತ್ತೇವೆ’ ಎಂದು ಭಯ ಹುಟ್ಟಿಸಿದ.

ಮರುದಿನ ಮೋಹಿತ್ ಕುಮಾರ್ ಎಂಬಾತ ವಾಟ್ಸ್‌ಆ್ಯಪ್ ಕರೆ ಮಾಡಿ ಆ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಮಹಿಳೆಯ ವೈಯಕ್ತಿಕ ವಿವರ, ಪಾನ್‌ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಬೆದರಿಸಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ. ಅದರಂತೆ ಮಹಿಳೆ ಜೂ.21ರಿಂದ ಜು.9ರವರೆಗೆ ಹಂತ ಹಂತವಾಗಿ 61,15,050 ರೂ.ಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಅನಂತರವೂ ಹೆಚ್ಚು ಹಣ ವರ್ಗಾಯಿಸುವಂತೆ ಆರೋಪಿಗಳು ಹೇಳಿದಾಗ ಮಹಿಳೆ ತನ್ನ ಪತಿ ಮತ್ತು ಮಕ್ಕಳಿಗೆ ವಿಚಾರ ತಿಳಿಸಿದರು. ತಾನು ಮೋಸ ಹೋಗಿರುವ ವಿಚಾರ ಅವರಿಗೆ ಗೊತ್ತಾಯಿತು. ಈ ಬಗ್ಗೆ ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net