

ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಗರದ ಹೊಸಮಠದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳು, ಎಸ್‌ಜಿಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ, ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಹೊಸಮಠದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ಒಳಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಯೋಗಾಸಕ್ತರು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು.
ನಾಡಗೀತೆ ಮೂಲಕ ಆರಂಭವಾದ ಯೋಗ ಪ್ರದರ್ಶನ ಧ್ಯಾನದೊಂದಿಗೆ ಅಂತ್ಯಗೊಂಡಿತು. ಬಳಿಕ ಸಭಾ ಕಾರ್ಯಕ್ರಮ, ಯೋಗಸಾಧಕರಿಗೆ ಸನ್ಮಾನ ಮಾಡಲಾಯಿತು.
ನೂರಾರು ಯೋಗಾಸಕ್ತರಿಂದ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಮೊದಲಿಗೆ ಸಡಿಲ, ಚಾಲನಾಕ್ರಿಯೆ, ಶೀತಲೀಕರಣ ವ್ಯಾಯಾಗಳನ್ನು ಮಾಡಲಾಯಿತು. ಬಳಿಕ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ ಪ್ರದರ್ಶಿಸಿ ಶವಾಸನದೊಂದಿಗೆ ವಿಶ್ರಾಂತಿ ಪಡೆಯಲಾಯಿತು.
ಬಳಿಕ ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀತಲಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ಮಾಡಿ, ಶಾಂತಿ ಮಂತ್ರದೊಂದಿಗೆ ಯೋಗಾಭ್ಯಾಸವನ್ನು ಅಂತ್ಯಗೊಳಿಸಲಾಯಿತು. ನಟರಾಜ ಪಬ್ಲಿಕ್ ಶಾಲೆ, ನಟರಾಜ ಮಹಿಳಾ ಪದವಿಪೂರ್ವ ಮತ್ತು ಪದವಿ ಕಾಲೇಜು, ನಟರಾಜ ಫಾರ್ಮಸಿ ಕಾಲೇಜು, ವಾತ್ಸಲ್ಯ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳು, ಎಸ್‌ಜಿಎಸ್ ಯೋಗ ಕೇಂದ್ರ, ವಿಜಯವಾಣಿ, ದಿಗ್ವಿಜಯ ಸಿಬ್ಬಂದಿ ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಸಾಮೂಹಿಕ ಯೋಗಾಭ್ಯಾಸದ ನಂತರ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಲಿದ್ದರು. ಮೈಸೂರು ವಿವಿ ಯೋಗವಿಜ್ಞಾನ ಕಾಲೇಜಿನ ವ್ಯವಸ್ಥಾಪಕ ಪ್ರೊ.ಮದಿಅಲಗನ್, ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ ಮತ್ತು ತರಬೇತುದಾರ ಎಚ್.ಎಂ.ರವಾಣಿಕರ್ ಭಾಗವಹಿಸಿದ್ದರು. ‘ವಿಜಯವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಟರಾಜ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಎಂ.ಶಾರದಾ ಅತಿಥಿಗಳನ್ನು ಸ್ವಾಗತಿಸಿದರು.
ಯೋಗ ಸಾಧಕರಾದ ಎನ್.ಆಶಾದೇವಿ, ಯೋಗಾಚಾರ್ಯ ಬಿ.ಧನ್ಯಕುಮಾರ್, ಯೋಗಕುಮಾರ್, ವೇದಿಕಾ ಮಾನ್ಯ ಶಿವಂ, ಪೂರ್ಣಾಮೃತ, ಹರ್ಷಿತಾ, ರಜತ್ ಗಿರಿ, ಸ್ವರೀತ್ ಹಾಗೂ ಭಾರತೀ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಸ್‌ಜಿಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ, ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗನೃತ್ಯ ಗಮನ ಸೆಳೆಯಿತು. ಐದು ನಿಮಿಷಕ್ಕೂ ಹೆಚ್ಚು ಕಾಲ ವಿದ್ಯಾರ್ಥಿಗಳು ವಿವಿಧ ಆಸನಗಳ ಮೂಲಕ ನೀಡಿದ ನೃತ್ಯ ಪ್ರದರ್ಶನ ರೋಮಾಂಚನಗೊಳಿಸಿತು.
ಪ್ರಸ್ತುತ ಜೀವನ, ಜೀವನಶೈಲಿ ಬದಲಾಗಿದೆ. ಎಲ್ಲ ಕಡೆ ಸ್ಪರ್ಧೆ ಏರ್ಪಟ್ಟಿದೆ. ಯಾವುದೇ ಸಾಧನೆ ಮಾಡಲು ಮನಸ್ಸಿಗೆ ಏಕಾಗ್ರತೆ, ದೇಹಕ್ಕೆ ಶಕ್ತಿ ಬೇಕಾಗಿದೆ. ಯೋಗ ಎಂಬುದು ದೇಹ ಮತ್ತು ಮನಸ್ಸನ್ನು ಒಗ್ಗೂಡಿಸುವುದಾಗಿದ್ದು, ಅದು ಆರೋಗ್ಯವನ್ನು ಸುಸ್ಥಿರವಾಗಿಡುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಹೇಳಿದರು.
ಯಾವುದೇ ವಿಷಯದಲ್ಲಿ ಸಾಧನೆ ಮಾಡಬೇಕಾದರೆ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಯಾವಾಗಲೂ ತೀಕ್ಷ್ಣವಾಗಿ ಇಡಬೇಕು. ಭಾರತದಲ್ಲಿ ಅನಾದಿ ಕಾಲದಿಂದಲೂ ಬಂದಿರುವ ಯೋಗವಿದ್ಯೆ ಮನಸ್ಸನ್ನು ತೀಕ್ಷ್ಣವಾಗಿ ಇಡಲು ಸಹಕರಿಸುತ್ತದೆ. ಸ್ಪರ್ಧಾತ್ಮಕ ಜಗತ್ತು ವೇಗವಾಗಿ ಓಡುತ್ತಿದೆ. ಜಗತ್ತಿನಲ್ಲಿ ನಾವು ಇರಬೇಕಾದರೆ ನಮ್ಮ ದೇಹ ಮತ್ತು ಮನಸ್ಸಿನ ಸ್ವಾಸ್ಥೃ ಕಾಪಾಡಿಕೊಳ್ಳಬೇಕಿದೆ. ಇದಕ್ಕಾಗಿ ನಿತ್ಯ 30 ರಿಂದ 40 ನಿಮಿಷ ಯೋಗ ಮಾಡಲು ಸಮಯ ಮೀಸಲು ಇಡಬೇಕು. ಆಗ ಜೀವನದಲ್ಲಿ ಸಾಧನೆ ಮಾಡಬಹುದು. ಲವಲವಿಕೆಯಿಂದಲೂ ಇರಬಹುದು. ದೇಹ ಒಂದೇ ರೀತಿ ಇರುವುದಿಲ್ಲ. ವಯಸ್ಸಾಗುತ್ತ ದೇಹ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆ ಶಕ್ತಿಯನ್ನು ಬೇರೆ ಕಡೆಯಿಂದ ತುಂಬಬೇಕಾದರೆ ಯೋಗ ಅಭ್ಯಾಸ ಮುಖ್ಯವಾಗಿದೆ ಎಂದರು.
ಅನೇಕ ವರ್ಷಗಳಿಂದ ಯೋಗ ಇತ್ತು. ನಾವು ಪ್ರೌಢಶಾಲೆಯಲ್ಲಿ ಇದ್ದಾಗಲೇ ಯೋಗ ಮಾಡುತ್ತಿದ್ದೆವು. ಆದರೆ, ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಯೋಗದ ಅವಶ್ಯಕತೆ ಈಗ ಕಂಡುಬಂದಿದ್ದು, ಇಡೀ ಜಗತ್ತಿನಲ್ಲಿ ಯೋಗದ ಮಹತ್ವ ಹೆಚ್ಚಾಗಿದೆ. ಹಾಗಾಗಿ, ನಾನು ಕುಲಪತಿಯಾಗಿದ್ದಾಗ ಮೈಸೂರು ವಿವಿಯಲ್ಲಿ ಎಂಎಸ್ಸಿ ಯೋಗಿಕ್ ಸೈನ್ಸ್ ಪ್ರಾರಂಭಿಸಿದ್ದೆವು. ಸದ್ಯ ಅಲ್ಲಿ ಡಿಪ್ಲೊಮಾ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಆರೋಗ್ಯದ ದೃಷ್ಟಿಯಿಂದ ಯೋಗ ಅಗತ್ಯವಾಗಿದ್ದು, ಇಂಥ ಕಾರ್ಯಕ್ರಮ ಆಯೋಜಿಸಿರುವ ವಿಜಯವಾಣಿ ದಿನಪತ್ರಿಕೆ, ದಿಗ್ವಿಜಯ ಸುದ್ದಿವಾಹಿನಿ, ಹೊಸಮಠದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳು, ಎಸ್‌ಜಿಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ, ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದರು.
ಮೈಸೂರು ವಿವಿ ಯೋಗ ವಿಜ್ಞಾನ ಕಾಲೇಜಿನ ವ್ಯವಸ್ಥಾಪಕ ಪ್ರೊ.ಮದಿಅಲಗನ್, ಯೋಗದ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ಪ್ರಸ್ತುತ ತಾಂತ್ರಿಕ ಸಮಾಜದಲ್ಲಿ ಕೆಲವರು ಫಿಟ್ನೆಸ್ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ಇಡೀ ವಿಶ್ವದಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ನಮ್ಮ ದೇಶದ ಮೂಲ ಸಂಸ್ಕೃತಿಯಾಗಿದ್ದು, ಅದನ್ನು ನಾವು ಕಲಿತು, ಕಲಿಸಿ ಬೆಳೆಸಬೇಕಿದೆ. ಹಾಗಾಗಿ ಎಲ್ಲರೂ ಯೋಗಾಭ್ಯಾಸ ಮಾಡಿ. ಖರ್ಚು ಇಲ್ಲದೆ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು. ನಿತ್ಯ ಅರ್ಧಗಂಟೆ ಅಭ್ಯಾಸ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಎಂದೂ ಮರೆಯಬಾರದು ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ನಿಜವಾಗಲೂ ಇದು ಸುಯೋಗ. ಹಣ ಐಶ್ವರ್ಯ ಇದ್ದರೆ ಸಂಪತ್ತು ಅಲ್ಲ. ಯಾರು ಯೋಗದ ಮೂಲಕ ಭಾರತ ಸಂಸ್ಕೃತಿಯನ್ನು ಎತ್ತಿ ಹಿಡಿತ್ತಾರೋ, ಯೋಗದ ಹಾದಿಯಲ್ಲಿ ಯಾರು ಸಾಗುತ್ತಾರೋ ಅವರೇ ನಿಜವಾದ ಸಿರಿವಂತರು, ಸಂಪತ್ತುಳ್ಳವರು ಎಂದರು.
ಪ್ರಸ್ತುತ ಪಾಶ್ಚಾತ್ಯ ಸಂಸ್ಕೃತಿಯ ಮೂಲಕ ನಮ್ಮನ್ನು ನಾವೇ ಬಲಿ ತೆಗೆದುಕೊಳ್ಳುತ್ತಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ, ದಿನದಿಂದ ದಿನಕ್ಕೆ ರೋಗಿಗಳು, ಆಸ್ಪತ್ರೆಗಳು ಹಾಗೂ ಶವಾಗಾರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಮರೆತು ಅನ್ಯಮಾರ್ಗದಲ್ಲಿ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ಪತಂಜಲಿ ಮಹರ್ಷಿಗಳು ಹಿಂದೆಯೇ ನಮ್ಮ ಆರೋಗ್ಯ, ಬದುಕು, ನಡವಳಿಕೆ, ದಿನಚರಿ ಹೇಗಿರಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಸುಸ್ಥಿರ ಬದುಕನ್ನು ನಡೆಸಬೇಕು. ನಾವೆಲ್ಲರೂ ದಿನನಿತ್ಯ ಶಾಂತಿ, ನೆಮ್ಮದಿ, ಧ್ಯಾನ ಮಾರ್ಗದಲ್ಲಿ ಸಾಗಿದಾಗ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ನಟರಾಜ ಶಿಕ್ಷಣ ಸಂಸ್ಥೆ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ, ಸಮಾಜಮುಖಿ ಕಾರ್ಯಕ್ರಮದಲ್ಲಿ ಹಾಗೂ ಶೋಷಿತ ವರ್ಗದ ಏಳಿಗೆಯಲ್ಲಿ ಸದಾ ತೆರೆದ ಬಾಗಿಲು ಎನ್ನುವಂತೆ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ದಿನಪತ್ರಿಕೆ, ದಿಗ್ವಿಜಯ ಸುದ್ದಿವಾಹಿನಿ ನೇತೃತ್ವದಲ್ಲಿ ನಮ್ಮ ಸಂಸ್ಥೆ ಆವರಣದಲ್ಲಿ ಯೋಗದಿನ ಆಚರಿಸಲಾಯಿತು ಎಂದು ತಿಳಿಸಿದರು.
ವಿಜಯವಾಣಿ ದಿನಪತ್ರಿಕೆ, ದಿಗ್ವಿಜಯ ವಾಹಿನಿ ಕೂಡ ಸುದ್ದಿ ಪ್ರಸಾರದಲ್ಲಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಶೋಷಿತರ ಪರ ಧ್ವನಿ ಎತ್ತುತ್ತಿವೆ ಎಂದು ಶ್ಲಾಘಿಸಿದರು.