ಹಣ ಪೋಲು ಮಾಡಲು ರಸ್ತೆ ಅಗೆತ?

19 kudur 1
Published on

15 ದಿನಗಳ ಹಿಂದಷ್ಟೇ ಕಾಂಕ್ರೀಟ್​ ಹಾಕಿದ್ದ ಮಾರ್ಗದಲ್ಲಿ ಗುಂಡಿ | ಗ್ಯಾಸ್​ಲೈನ್​ಗಾಗಿ ಕಾಮಗಾರಿ | ಪುರಸಭೆ ನಡೆಗೆ ಸಾರ್ವಜನಿಕರ ಆಕ್ರೋಶ

ಬಿಡದಿ: ಪುರಸಭೆ ವ್ಯಾಪ್ತಿಯ 11ನೇ ವಾರ್ಡ್​ನ 5ನೇ ಅಡ್ಡ ರಸ್ತೆಗೆ 15 ದಿನಗಳ ಹಿಂದಷ್ಟೇ ಕಾಂಕ್ರೀಟ್​ ಹಾಕಲಾಗಿತ್ತಾದರೂ ಗುರುವಾರ ಗ್ಯಾಸ್​ ಪೈಪ್​ಲೈನ್​ಗಾಗಿ ಮಾರ್ಗದ ಎರಡೂ ಕಡೆ ಕಾಂಕ್ರೀಟ್​ ಅಗೆದು ಗುಂಡಿಮಯವಾಗಿಸಲಾಗಿದೆ.

ಕೇತಗಾನಹಳ್ಳಿಯ 5ನೇ ಅಡ್ಡ ರಸ್ತೆಯಲ್ಲಿ ಸುಮಾರು 20 ಲ ರೂ. ವೆಚ್ಚದಲ್ಲಿ 100 ಮೀಟರ್​ವರೆಗೆ ಕಾಂಕ್ರೀಟ್​ ಹಾಕಲಾಗಿತ್ತು. ಗ್ಯಾಸ್​ಲೈನ್​, ಕುಡಿಯುವ ನೀರಿನ ಪೈಪ್​ಲೈನ್​ ಅಳವಡಿಸಿದ ಬಳಿಕ ಕಾಂಕ್ರೀಟ್​ ಹಾಕುವುದನ್ನು ಬಿಟ್ಟು ತರಾತುರಿಯಲ್ಲಿ ಕಾಂಕ್ರೀಟ್​ ಹಾಕುವ ಪ್ರಮೇಯ ಏನಿತ್ತು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರಲ್ಲದೇ ತೆರಿಗೆ ಹಣವನ್ನು ಪೋಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಂದ ಹಾರಿಕೆ ಉತ್ತರ:

ಇತ್ತೀಚೆಗಷ್ಟೇ ಹಾಕಿದ್ದ ಕಾಂಕ್ರೀಟ್​ ರಸ್ತೆ ಅಗೆದಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್​ ಶ್ಯಾಮ್​ ಅವರನ್ನು ಪ್ರಶ್ನಿಸಿದರೆ ಪುರಸಭೆಯಿಂದ ಗುಂಡಿ ತಗೆಸಿಲ್ಲ, ಅಲ್ಲಿನ ಯಾರೋ ಸ್ಥಳಿಯರೇ ಗುಂಡಿ ತಗೆದಿದ್ದಾರೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಜೆಸಿಬಿ ಯಂತ್ರದಿಂದ ಗ್ಯಾಸ್​ ಪೈಪ್​ ಮಾಡಲು ಗುಂಡಿ ತೆಗೆದಿರುವುದು ಕಣ್ಣಮುಂದಿದ್ದರೂ ಹುಳುಕು ಮರೆಮಾಚಲು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಕೆಲವೆಡೆ ಅರ್ಧಂರ್ಬಧ ಕಾಮಗಾರಿ ಮಾಡಿ ಹಾಗೇ ಬಿಟ್ಟಿದ್ದಾರೆ. ಹೀಗಿರುವಾಗ ಗ್ಯಾಸ್​ಲೈನ್​, ಕುಡಿಯುವ ನೀರಿನ ಕಾಮಗಾರಿ ಬಾಕಿ ಇದ್ದರೂ ಕೆಲ ರಸ್ತೆಗಳಿಗೆ ತರಾತುರಿಯಲ್ಲಿ ಕಾಂಕ್ರೀಟ್​ ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗ **ಕೇತುಗಾನಹಳ್ಳಿ ವಾರ್ಡ್​ನಲ್ಲಿ ಇತ್ತೀಚೆಗಷ್ಟೇ ಹಾಕಿದ್ದ ಕಾಂಕ್ರೀಟ್​ ರಸ್ತೆ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಪುರಸಭೆಯ ಇಂಜಿನಿಯರ್​ಗಳನ್ನು ಕೇಳಿದರೆ ಪ್ರಭಾವಿ ಪುರಸಭೆ ಸದಸ್ಯನ ಕೈಯಲ್ಲಿ ಪೋನ್​ ಕೊಟ್ಟು ಧಮ್ಕಿ ಹಾಕಿಸುತ್ತಾರೆ. -ಆರ್​.ಎಚ್​.ರಾಜಶೇಖರ ರಾಜ್ಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯ

ಡಿಸಿಗೆ ದೂರು ನೀಡಿದರೂ ಇಲ್ಲ ಕ್ರಮ: ಸರ್ಕಾರದ ಆದೇಶ, ಸುತ್ತೋಲೆ ಗಾಳಿಗೆ ತೂರಿ ಪುಸಭೆಯಿಂದ ಕಾಮಗಾರಿ ನಡೆಸಲಾಗುತ್ತಿದೆ ಎಂದು ರಾಜ್ಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದ ಪದಾಧಿಕಾರಿಗಳು ಅ.25ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ, ಗ್ಯಾಸ್​ ಪೈಪ್​ಲೈನ್​, ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಈ ಎಲ್ಲ ಕೆಲಸಗಳು ಮುಗಿದ ನಂತರ ರಸ್ತೆಗೆ ಕಾಂಕ್ರೀಟ್​ ಹಾಕುವಂತೆ ಮನವಿ ಸಲ್ಲಿಸಲಾಗಿತ್ತು. ಜತೆಗೆ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕರಿಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿತ್ತು. ಆದರೂ ಪುರಸಭೆ ಅಧಿಕಾರಿಗಳು ತರಾತುರಿಯಲ್ಲಿ ರಸ್ತೆಗೆ ಕಾಂಕ್ರೀಟ್​ ಹಾಕಿ, ಈಗ ಗ್ಯಾಸ್​ಲೈನ್​ ಮತ್ತೆ ರಸ್ತೆ ಅಗೆದಿರುವುದು ಕೆಂಗೆಣ್ಣಿಗೆ ಗುರಿಯಾಗಿದೆ.

ಕೇತುಗಾನಹಳ್ಳಿ ವಾರ್ಡ್​ನ 5ನೇ ಅಡ್ಡ ರಸ್ತೆಗೆ ಇತ್ತೀಚೆಗೆ ಹಾಕಲಾಗಿದ್ದ ಕಾಂಕ್ರೀಟ್​ಅನ್ನು ಗ್ಯಾಸ್​ಲೈನ್​ ಕಾಮಗಾರಿ ಹಿನ್ನೆಲೆ ಅಗೆದಿರುವ ಬಗ್ಗೆ ಇಂಜಿನಿಯರ್​ ಶ್ಯಾಮ್​ ಅವರ ಬಳಿ ಮಾಹಿತಿ ಕೇಳಲಾಗಿ, ಗ್ಯಾಸ್​ ಲೈನ್​ ಕಾಮಗಾರಿಯ ಗುತ್ತಿಗೆದಾರ ನಮ್ಮ ಗಮನಕ್ಕೆ ತಾರದೆ ಕಾಂಕ್ರೀಟ್​ ಅಗೆದಿರುವುದಾಗಿ ತಿಳಿಸಿದ್ದಾರೆ. ಗುತ್ತಿಗೆದಾರನ ಮೇಲೆ ದೂರು ನೀಡಲು ಇಂಜಿನಿಯರ್​ಗೆ ಸೂಚಿಸಲಾಗಿದೆ. - ಮೀನಾ ಮುಖ್ಯಾಧಿಕಾರಿ, ಬಿಡದಿ ಪುರಸಭೆ

ಕನಿಷ್ಠ ಅರಿವೂ ಇಲ್ಲದ ಅಧಿಕಾರಿಗಳು: ಪುರಸಭೆಗೆ ಕಟ್ಟುವ ತೆರಿಗೆ ಹಣ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಪೋಲಾಗುತ್ತಿದೆ. ಎಲ್ಲ ಕಾಮಗಾರಿ ಮುಗಿದ ನಂತರ ರಸ್ತೆ ನಿರ್ಮಾಣ ಮಾಡಬೇಕೆಂಬ ಕನಿಷ್ಠ ಪರಿಾನವೂ ಇಲ್ಲದ ಅಧಿಕಾರಿಗಳು ಪುರಸಭೆಯಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

-ಚೇತನ್​ ಚಕ್ಕೆರೆ ಬಿಡದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net